ಬೆಂಗಳೂರು, ಜ 12 (DaijiworldNews/PY): "ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಲಾಗಿದೆ" ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಜ.31ರವರೆಗೆ 1-9ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ 10,11,12ನೇ ತರಗತಿ ನಡೆಸುತ್ತಿದೆ. ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ" ಎಂದರು.
"ಬೆಂಗಳೂರು ನಗರದಲ್ಲಿ ಸೋಂಕಿನ ತೀವ್ರತೆ ಆಧರಿಸಿ ಮುಂದಿನ ದಿನಗಳಲ್ಲಿ 10, 11 ಹಾಗೂ 12ನೇ ತರಗತಿ ಬಗ್ಗೆ ಅವಶ್ಯಕವಾದ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಮಕ್ಕಳಿಗೆ ಕಳೆದ ಒಂದೂವರೆ ವರ್ಷಗಳಿಂದ ಸಮರ್ಪಕವಾದ ಶಿಕ್ಷಣ ಸಿಕ್ಕಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡಲ್ಲ. ಕೊರೊನಾ ಪ್ರಕರಗಳು ಹೆಚ್ಚಾದರೂ ಶಾಲೆ ಬಂದ್ ಮಾಡುವುದಿಲ್ಲ" ಎಂದು ಹೇಳಿದರು.
ಒಂದು ಶಾಲೆಯಲ್ಲಿ ಓರ್ವ ವಿದ್ಯಾರ್ಥಿಗೆ ಕೊರೊನಾ ಸೋಂಕು ಕಂಡು ಬಂದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೊರೊನಾ ಟೆಸ್ಟ್ ಮಾಡಿಸಿ ತುಂಬಾ ಗಂಭೀರವಾಗಿದ್ದರೆ ಮಾತ್ರ ಬಂದ್ ಮಾಡಿ. ತೀರಾ ಅಗ್ಯವಿದಲ್ಲಿ ಮಾತ್ರ ಶಾಲೆ ಬಂದ್ ಮಾಡುವಂತೆ ಸಲಹೆ ನೀಡಿದರು.