ಚಿತ್ರದುರ್ಗ, ಜ 12 (DaijiworldNews/PY): "ಮೇಕೆದಾಟು ಪಾದಯಾತ್ರೆ ನಡೆಸುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ನ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಎನ್ನುವ ಮೂರು ಹಕ್ಕಿಗಳನ್ನು ಒಂದೇ ಕಲ್ಲಿನಲ್ಲಿ ಹೊಡೆಯಲು ಕೆಪಿಸಿಸಿ ಡಿ ಕೆ ಶಿವಕುಮಾರ್ ಯತ್ನಿಸಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂತಹ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎನ್ನುವುದನ್ನು ವಿಪಕ್ಷ ನಾಯಕರಿಗೆ ಸರ್ಕಾರ ಮನವರಿಕೆ ಮಾಡಿತ್ತು. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಪಾದಯಾತ್ರೆಯನ್ನು ಮಾಡುತ್ತಿದೆ. ಕೈ ನಾಯಕರಿಗೆ ನೀರಿಗಿಂತ ಕುರ್ಚಿ ಮುಖ್ಯ" ಎಂದು ಟೀಕಿಸಿದ್ದಾರೆ.
"ಕೊರೊನಾ ಸಂದರ್ಭ ಕಾಂಗ್ರೆಸ್ ಅಮಾಯಕ ಜನರ ಆರೋಗ್ಯದೊಂದಿಗೆ ಆಟವಾಡುತ್ತಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಲಾಗುತ್ತದೆ" ಎಂದಿದ್ದಾರೆ.
"ಕಾಂಗ್ರೆಸ್, ಸರ್ಕಾರದ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿದೆ. ಈ ಪಾದಯಾತ್ರೆಯು ಮೇಕೆದಾಟುವಿನಿಂದ ತಮಿಳುನಾಡಿಗೆ ನಡೆಯಬೇಕಿದೆ" ಎಂದು ಹೇಳಿದ್ದಾರೆ.