ಬೆಂಗಳೂರು, ಜ.12 (DaijiworldNews/PY): "ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ. ನಿಮ್ಮ ರಾಜಕೀಯ ಉದ್ದೇಶದ ಪಾದಯಾತ್ರೆಯನ್ನು ದಯವಿಟ್ಟು ಕೈಬಿಡಿ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, "ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕರಿಗೆ ಮತ್ತೊಮ್ಮೆ ಮನವಿ ಮಾಡುತ್ತಿದ್ದು, ನಿಮ್ಮ ತೀರ್ಮಾನವನ್ನು ಸಾರ್ವಜನಿಕರ ಆರೋಗ್ಯದ ದೃಷ್ಟಿಯಲ್ಲಿ ಪಾದಯಾತ್ರೆಯನ್ನು ಕೈಬಿಡಿ" ಎಂದಿದ್ದಾರೆ.
"ಕೊರೊನಾ ಸೋಂಕು ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಎಲ್ಲರೂ ಆತಂಕಗೊಂಡಿದ್ದಾರೆ. ನೀವು ಈಗಾಗಲೇ ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು, ಅವರ ಬಳಿ ಕ್ಷಮೆ ಕೇಳಬೇಕಾಗಿದೆ" ಎಂದು ಹೇಳಿದ್ದಾರೆ.
"ಕೈ ನಾಯಕರು ಪಾದಯಾತ್ರೆ ಪ್ರಾರಂಭಿಸಿದಾಗ, ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಕುರಿತು ಕಳವಳವಿತ್ತು. ಹಾಗಾಗಿ ನಾವು ಕಾರ್ಯಕ್ರಮವನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದೆವು. ಕೊರೊನಾ ಕುರಿತು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿರುವುದಲ್ಲದೇ ವಿತಂಡ ವಾದ ಮಂಡಿಸುತ್ತಿದ್ದಾರೆ" ಎಂದಿದ್ದಾರೆ.