ಪಂಜಾಬ್, ಜ 12 (DaijiworldNews/MS): ಆಮ್ ಆದ್ಮಿ ಪಕ್ಷ ಪಂಜಾಬ್ ವಿಧಾನಸಭೆ ಚುನಾವಣೆಗೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿನ ವಾರ ಪ್ರಕಟಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ , ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದರು.
ಎರಡು ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಅರವಿಂದ್ ಕೇಜ್ರಿವಾಲ್ , " ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುತ್ತದೆ. ಪಂಜಾಬ್ ಜನರ ಹಿಂದಿನ ಎಲ್ಲಾ ತ್ಯಾಗಗಳಿಗೆ ನ್ಯಾಯವನ್ನು ಒದಗಿಸುವ ಪ್ರಯತ್ನ ನಡೆಸುತ್ತದೆ" ಎಂದು ಹೇಳಿದರು.
"ಮಾತ್ರವಲ್ಲದೆ ಪ್ರಧಾನಿಯಾಗಲಿ ಅಥವಾ ಬೇರೆಯವರಾಗಲಿ ಎಲ್ಲರಿಗೂ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುವುದು " ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಅಭ್ಯರ್ಥಿಯ ಮಾಹಿತಿ ವಿವರಿಸಲು ನಿರಾಕರಿಸಿದ ಕೇಜ್ರಿವಾಲ್, "ಸಿಎಂ (ಮುಖ್ಯಮಂತ್ರಿ) ಅಭ್ಯರ್ಥಿಯ ಘೋಷಣೆಯನ್ನು ಮುಂದಿನ ವಾರ ಮಾಡಲಾಗುವುದು" ಎಂದು ಹೇಳಿದರು.
ಭಾರತದ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಕೇಜ್ರಿವಾಲ್ ಅವರು ಮೊದಲ ಬಾರಿಗೆ ಪಂಜಾಬ್ಗೆ ಭೇಟಿ ನೀಡಿದ್ದಾರೆ.
ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರ ಹೆಸರ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಹೆಸರು ಕೇಳಿಬರುತ್ತಿದ್ದರೂ, ಕೇಜ್ರಿವಾಲ್ ಅವರು ಮುಂಚಿತವಾಗಿ ಅವರ ಹೆಸರನ್ನು ಘೋಷಿಸಲು ಹಿಂಜರಿಯುತ್ತಿದ್ದಾರೆ. 117 ಸದಸ್ಯ ಬಲವನ್ನು ಹೊಂದಿರುವ ಪಂಜಾಬ್ ವಿಧಾನಸಭೆಯಲ್ಲಿಆಮ್ ಆದ್ಮಿ ಪಕ್ಷವು 2017 ರಲ್ಲಿ ತನ್ನ ಚೊಚ್ಚಲ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಿಲ್ಲದೆ ಸ್ಪರ್ಧಿಸಿತು ಮತ್ತು 20 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಯಿತು.