ತೆಲಂಗಾಣ, ಜ 11 (DaijiworldNews/MS): ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆ ಪತ್ತೆಯಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ದೇವಿ ಪಾದದ ಅಡಿ ವ್ಯಕ್ತಿಯ ತಲೆ ಪತ್ತೆಯಾಗಿದೆ. ರುಂಡವನ್ನ ನೋಡಿ ಬೆಚ್ಚಿಬಿದ್ದ ಅರ್ಚಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಭಯಭೀತರಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸ್ ಅಧಿಕಾರಿ ಆನಂದ್ ರೆಡ್ಡಿ ನೇತೃತ್ವದ ತಂಡ ತನಿಖೆ ಮುಂದುವರಿಸಲಾಗಿದೆ.
ಕಾಳಿ ದೇವಿಯ ಪಾದದಡಿ ಇದ್ದ ರುಂಡದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರುಂಡವು ಮಾನಸಿಕ ಅಸ್ವಸ್ಥನಾಗಿದ್ದ ಸೂರ್ಯಪೇಟೆ ಜಿಲ್ಲೆಯ 30 ವರ್ಷದ ಯುವಕ ಜಹೇಂದರ್ ನಾಯಕ್ ಎಂಬಾತನದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಬಳಿಯ ತುರ್ಕಯಾಂಜಲ್ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದ ಎಂದು ತಿಳಿದು ಬಂದಿದೆ. ಕೂದಲು ಮತ್ತು ಚರ್ಮವನ್ನು ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ದೇವರಕೊಂಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದರೆಡ್ಡಿ, ಸುಮಾರು 30ರ ಆಸುಪಾಸಿನ ವ್ಯಕ್ತಿಯನ್ನು ಬೇರೆಡೆ ಹತ್ಯೆಗೈದು ತಲೆಯನ್ನು ವಿಗ್ರಹದ ಪಾದದ ಕೆಳಗೆ ಹಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಎಲ್ಲ ಆಯಾಮಗಳಲ್ಲಿ ನಾವು ತನಿಖೆ ಮಾಡುತ್ತೇವೆ. ಈ ಕೃತ್ಯವನ್ನು ಭೇದಿಸಲು 8 ತಂಡವನ್ನು ರಚಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.