ಬೆಂಗಳೂರು, ಜ 11 (DaijiworldNews/MS): ಕರ್ನಾಟಕದಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪಾದಯಾತ್ರೆ ವೇಳೆ ಕೋವಿಡ್ ಮಾರ್ಗಸೂಚಿಗಳನ್ನುಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸೇರಿ 35 ಜನ ಕಾಂಗ್ರೆಸ್ ಮುಖಂಡರ ವಿರುದ್ದ ರಾಜ್ಯ ಸರ್ಕಾರ ಪ್ರಕರಣವನ್ನ ದಾಖಲಿಸಿದೆ.
ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ " ಸರ್ಕಾರ ಇನ್ನೂ ಎಷ್ಟು ಕೇಸು ದಾಖಲಿಸುತ್ತದೋ ದಾಖಲಿಸಲಿ, ಎಲ್ಲದಕ್ಕೂ ನಾವು ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ" ಎಂದು ತಿರುಗೇಟು ನೀಡಿದ್ದಾರೆ.
ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡಿಸಿದ ಸಿದ್ದರಾಮಯ್ಯ , "ಮೇಕೆದಾಟು ಯೋಜನೆ ಜಾರಿಯಾಗಿ ಎರಡೂವರೆ ಕೋಟಿ ಕನ್ನಡಿಗರಿಗೆ ಅನುಕೂಲವಾಗಲಿ ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯಿಂದ ಜನ ಜಾಗೃತರಾಗುತ್ತಾರೆಂದು ಹೆದರಿ ನಾನೂ ಸೇರಿದಂತೆ ಪಕ್ಷದ 30 ಜನರ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿದೆ. ಕೊರೊನಾ ತಡೆಗಟ್ಟುವುದೇ ಸರ್ಕಾರದ ಉದ್ದೇಶವಾಗಿದ್ದರೆ ಸುಭಾಷ್ ಗುತ್ತೇದಾರ್, ರೇಣುಕಾಚಾರ್ಯ ಮೇಲೂ ಕೇಸು ದಾಖಲಾಗಬೇಕಿತ್ತು ಅಲ್ಲವೇ? ನಮ್ಮ ಮೇಲೆ ಮಾತ್ರ ಕಾನೂನು ಕ್ರಮ ಏಕೆ?ಸರ್ಕಾರ ಇನ್ನೂ ಎಷ್ಟು ಕೇಸು ದಾಖಲಿಸುತ್ತದೋ ದಾಖಲಿಸಲಿ, ಎಲ್ಲದಕ್ಕೂ ನಾವು ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ" ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಯ ಬಲವರ್ಧನೆಗಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ. ಪಾದಯಾತ್ರೆ ನಡೆದರೆ ತಮ್ಮ ಈ ಮೋಸ ಬಯಲಾಗಬಹುದು ಎಂಬ ಭಯ ಬಿಜೆಪಿಯವರನ್ನು ಕಾಡಲು ಆರಂಭವಾಗಿದೆ. ಪಾದಯಾತ್ರೆಯನ್ನು ತಡೆಯುವ ಎಲ್ಲಾ ರೀತಿಯ ಪ್ರಯತ್ನಗಳು ಸರ್ಕಾರದಿಂದ ನಡೆಯುತ್ತಿದೆ. ಸರ್ಕಾರದ ಯಾವುದೇ ಬೆದರಿಕೆ ತಂತ್ರಗಳಿಗೆ ನಾವು ಮಣಿಯದೆ, ಹನ್ನೊಂದು ದಿನಗಳ ಕಾಲ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಸವಾಲೊಡ್ಡಿದ್ದಾರೆ.