ಬೆಂಗಳೂರು, ಜ 11 (DaijiworldNews/MS): ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದ್ದು, ಕಾಂಗ್ರೆಸ್ ಪಾದಯಾತ್ರೆ ತಬ್ಲಿಘಿಗಳಿಗೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, " ಕಾಂಗ್ರೆಸ್ ಪಾದಯಾತ್ರೆ ಮತ್ತು ತಬ್ಲಿಘಿ ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.ಕಾಂಗ್ರೆಸ್ ಪ್ರಾಯೋಜಿತ ಸುಳ್ಳಿನಜಾತ್ರೆ ಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.ಕಾಂಗ್ರೆಸ್ ಬೆಂಗಳೂರಿಗೆ ನೀರು ಕೊಡುತ್ತೇವೆ ಹೇಳಿ, ಈಗ ಬೆಂಗಳೂರಿಗೆ ಕೋವಿಡ್ ಸೋಂಕು ಹಂಚುತ್ತಿದೆ.ಡಿಕೆಶಿ ಅವರೇ, ಕೋವಿಡ್ಯಾತ್ರೆ ಮುಂದುವರೆಸಿ ಬೆಂಗಳೂರನ್ನು ಕೋವಿಡ್ ಹಬ್ ಮಾಡುವ ಯೋಜನೆಯಿದೆಯೇ? ಎಂದು ಕಿಡಿಕಾರಿದೆ.
ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು ಸುಳ್ಳಿನ ಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ. ಈ ಮೂಲಕ ಕೋವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ. ಕೊರೋನಾ ಸ್ಪ್ರೆಡರ್ ಡಿಕೆ ಸೋದರರೆ, ನಿಮ್ಮ ಸುಳ್ಳಿನ ಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಢಾರಿಗಳು ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೋನಾ ಹಬ್ಬಿಸುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಸುಳ್ಳಿನ ಜಾತ್ರೆ ಈಗ ಕೊರೋನಾ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಆಗುತ್ತಿದೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ದೇಶವನ್ನು ಕಾಡಿದ್ದ ತಬ್ಲಿಘಿಗಳ ರೀತಿ ಈಗ ಡಿಕೆಶಿ ಸೋದರರು ಪಾದಯಾತ್ರೆಯ ನೆಪದಲ್ಲಿ ರಾಜ್ಯದಲ್ಲಿ ಕೊರೋನಾ ಹಂಚುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಕಾಂಗ್ರೆಸ್ ಎಂದು ಟೀಕಿಸಿದೆ.