ನವದೆಹಲಿ, ಜ 11 (DaijiworldNews/MS): ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರು ಮಾಡಿರುವ ಟ್ವೀಟ್ ಒಂದಕ್ಕೆ ತಿರುಗೇಟು ನೀಡಲು ನಟ ಸಿದ್ಧಾರ್ಥ್ ಇದೀಗ ತಾವೇ ವಿವಾದಕ್ಕೆ ಸಿಲುಕಿದ್ದಾರೆ.
ಸೈನಾ ವಿರುದ್ದ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡುವ ಮೂಲಕ ನಟ ಸಿದ್ಧಾರ್ಥ್ ತೀವ್ರ ಟೀಕೆಗೆ ಗುರಿಯಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ, ನಟ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.
ನೆಹ್ವಾಲ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪವನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಸೈನಾ ನೆಹ್ವಾಲ್ ಅವರ ಈ ಟ್ವೀಟ್ಗೆ ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು. ಅವರು ಡಬಲ್ ಮೀನಿಂಗ್ ಪದ ಬಳಸಿದ್ದಲ್ಲದೆ, ನಿಮಗೆ ಶೇಮ್ ಆನ್ ಯು ರಿಹಾನ್ನಾ(ಪಾಪ್ ತಾರೆ ಹೆಸರು) ಎಂದು ಬರೆದಿದ್ದರು. ಇದಲ್ಲದೆ ಕಾಕ್ ಮತ್ತು ಬುಲ್ ಎಂಬ ಪದವನ್ನು ಬಳಸಿದ್ದರು . ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ , " ನಾನು ಕಾಕ್ ಮತ್ತು ಬುಲ್ ಅನ್ನು ಸಾಂಕೇತಿಕವಾಗಿ ಬಳಸಿದ್ದಷ್ಟೇ ಅದರ ಹಿಂದೆ ಅಗೌರವ ಸೂಚಿಸುವ ಉದ್ದೇಶವಿರಲಿಲ್ಲ " ಎಂದಿದ್ದಾರೆ. ಆದರೆ ಈ ವಿಚಾರವಾಗಿ ಮಹಿಳಾ ಆಯೋಗ ತನಿಖೆ ನಡೆಸಿ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಹಾರಾಷ್ಟ್ರ ಡಿಜಿಪಿಗೆ ಹೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ನಟನ ಟ್ವೀಟ್ ಖಾತೆಯನ್ನು ನಿರ್ಬಂಧಿಸುವಂತೆ ಟ್ವಿಟರ್ಗೆ ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸೈನಾ, ನಾನು ಅವರನ್ನು ನಟನಾಗಿ ಇಷ್ಟಪಡುತ್ತಿದ್ದೇನೆ. ಆದರೆ ಇದು ಸರಿಯಲ್ಲ ಅವರು ಒಳ್ಳೆಯ ಮಾತುಗಳಿಂದ ಪ್ರತಿಕ್ರಿಯೆ ನೀಡಬಹುದಿತ್ತು ಎಂದಿದ್ದಾರೆ.