ನವದೆಹಲಿ, ಜ 10 (DaijiworldNews/HR): ಪ್ರಧಾನಿ ಮೋದಿಯವರ ಭದ್ರತೆ ವ್ಯವಸ್ಥೆಯಲ್ಲಿ ಲೋಪವಾಗಿದೆ ಎಂಬ ಆರೋಪ ಕುರಿತಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದ್ದು, ಈ ವಿಚಾರಣೆಯನ್ನು ನಡೆಸುವುದು ಬೇಡವೆಂಬ ಧ್ವನಿ ಸಂದೇಶವೊಂದು ಸುಪ್ರೀಂ ಕೋರ್ಟ್ನ ಹಲವು ನ್ಯಾಯವಾದಿಗಳಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಸುಪ್ರೀಂ ಕೋರ್ಟ್ನ ವಕೀಲರು, ಮೋದಿ ಆಡಳಿತಕ್ಕೆ ಸಹಾಯ ಮಾಡಬೇಡಿ ಎಂದು ಹೇಳುವ ಧ್ವನಿ ಸಂದೇಶದೊಂದಿಗೆ ಅಂತರರಾಷ್ಟ್ರೀಯ ಕರೆ ಬಂದಿದೆ ಎಂದು ತಿಳಿಸಿದ್ದಾರೆ.
ಇನ್ನು 1984ರ ಗಲಭೆಯಲ್ಲಿ ಸಿಖ್ ಸಮುದಾಯದವರ ಹತ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಹಾಯ ಮಾಡಲಿಲ್ಲ ಎಂದೂ ಧ್ವನಿ ಸಂದೇಶದಲ್ಲಿ ತಿಳಿಸಲಾಗಿದೆ.
ಈ ವಿಚಾರದ ಕುರಿತು ಎನ್ಐಎ ತನಿಖೆ ನಡೆಸಬೇಕೆಂದು ವಕೀಲ ಮಹೇಶ್ ಜೇಠ್ಮಲಾನಿ ಒತ್ತಾಯಿಸಿದ್ದು, ಪ್ರಧಾನ ಮಂತ್ರಿ ಮತ್ತು ಬೆಂಗಾವಲು ಪಡೆಯಿದ್ದ ವಾಹನಗಳು ಇದೇ 5ರಂದು ಪಂಜಾಬ್ನ ಫಿರೋಜ್ಪುರ್ ಮೇಲ್ಸೇತುವೆಯಲ್ಲಿ 15 ನಿಮಿಷ ಸ್ಥಗಿತವಾಗಿದ್ದವು. ಆಗ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದು ಭದ್ರತಾ ವೈಫಲ್ಯದ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಭದ್ರತಾ ವೈಪಲ್ಯ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.