ಬೆಂಗಳೂರು,ಜ 10 (DaijiworldNews/HR): ಸಚಿವ ಎಸ್.ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ಗೆ ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿ ರಾಹುಲ್ ಭಟ್ ಎಂಬುವನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣ ಕುರಿತು ಸಿಸಿಬಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರ ಮಗಳ ಹೆಸರಿನಲ್ಲಿರುವ ಸಿಮ್ ಕಾರ್ಡ್ನಿಂದ ಆರೋಪಿಯು ನಿಶಾಂತ್ಗೆ ಕರೆ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದು, ಈ ಬಗ್ಗೆ ಶಾಸಕರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ.
ಇನ್ನು ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ ಒಂದು ಕೋಟಿ ರೂ.ಗೆ ಬ್ಲಾಕ್ಮೇಲ್ ಮಾಡಿದ್ದು ನನ್ನ ತಂದೆಯವರ ರಾಜಕೀಯ ಜೀವನದ ತೇಜೋವಧೆ ಮಾಡುವ ಷಡ್ಯಂತ್ರ ರೂಪಿಸಲಾಗಿದ್ದು, ಈ ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿಶಾಂತ್ ಸೈಬರ್ ಕ್ರೈಮ್ಗೆ ದೂರು ನೀಡಿದ್ದಾರೆ.