ಲಕ್ನೋ, ಜ.10 (DaijiworldNews/PY): ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೊರೆಯುವ ಚಳಿಯಲ್ಲೂ ಬರಿಗಾಲಿನಲ್ಲಿ ಇರುವುದನ್ನು ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರಿಗೆ 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ವಾರಣಾಸಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ದೇಗುಲದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನವರು ಬರಿಗಾಲಿನಲ್ಲಿರುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದರು. ಹಾಗಾಗಿ ಅವರಿಗಾಗಿ 100 ಜೊತೆ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್ನಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ದೇವಾಲಯದ ಅರ್ಚಕರು ಸೇರಿದಂತೆ ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಹಾಗೆಯೇ ಭಕ್ತರು ಚಾಚು ತಪ್ಪದೇ ಪಾಲಿಸುತ್ತಾರೆ. ಹಾಗಾಗಿ, ಸೆಣಬಿನಿಂದ ತಯಾರಿಸಿದ ಪಾದರಕ್ಷೆಗಳನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.