ಭೋಪಾಲ್, ಜ,10(DaijiworldNews/AN): ಮೀಸೆ ತೆಗೆಯಲು ಹೇಳಿದ್ದನ್ನು ನಿರಾಕರಿಸಿದಕ್ಕಾಗಿ ಪೊಲೀಸ್ ಕಾನ್ಸ್ಟೇಬಲ್ ರಾಕೇಶ್ ರಾಣಾ ಎಂಬವರನ್ನು ಅಮಾನತುಗೊಳಿಸಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ರಾಣಾ ಅವರನ್ನು ವಿಶೇಷ ಡಿಜಿ ಸಹಕಾರ ವಂಚನೆ ಮತ್ತು ಸಾರ್ವಜನಿಕ ಸೇವಾ ಖಾತರಿಗೆ ಚಾಲಕರಾಗಿ ನಿಯೋಜಿಸಲಾಗಿದ್ದು, ಅವರ ಕೂದಲು ಮತ್ತು ಮೀಸೆಯನ್ನು ಟ್ರಿಮ್ ಮಾಡುವಂತೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿದಕ್ಕಾಗಿ ಅಮಾನತು ಮಾಡಲಾಗಿದೆ" ಎಂದು ತಿಳಿಸಿದರು.
ಇನ್ನು ರಾಣಾ ಅವರ ಕೂದಲು ಮತ್ತು ಮೀಸೆ ತುಂಬಾ ಉದ್ದವಾಗಿದ್ದು, ಇದು ಪೊಲೀಸ್ ಸಮವಸ್ತ್ರ ಧರಿಸುವಾಗ ಅಶಿಸ್ತು ತೋರಿಸುವುದರೊಂದಿಗೆ ಇತರ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೀಸೆಗಳನ್ನು ಸರಿಯಾದ ರೀತಿಯಲ್ಲಿ ಟ್ರಿಮ್ ಮಾಡಲು ಅವರಿಗೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಘಟನೆಗೆ ಸಂಬಧಿಸಿದಂತೆ ಪ್ರತಿಕ್ರಿಯಿಸಿದ ರಾಣಾ, "ನಾನು ರಜಪೂತ ಕುಟುಂಬದಿಂದ ಬಂದವನಾಗಿದ್ದು, ಮೀಸೆ ನಮ್ಮ ಗೌರವದ ಸಂಕೇತ, ಕಛೇರಿಯಲ್ಲಿ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳೂ ಮೀಸೆ ಹೊಂದಿದ್ದಾರೆ, ಆದರೆ ನನ್ನ ಬಳಿ ಮೀಸೆ ತೆಗೆಯಲು ಯಾಕೆ ಹೇಳಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ, ನಾನು ಸುಮಾರು ಒಂದು ವರ್ಷದಿಂದ ಈ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಇದ್ದಕ್ಕಿದ್ದಂತೆ ಈ ನಿರ್ಧಾರ ಏಕೆ ತೆಗೆದುಕೊಂಡರು ಎಂಬುದು ನನಗೆ ತಿಳಿದಿಲ್ಲ. ನಾನು ಅಮಾನತು ಸ್ವೀಕರಿಸುತ್ತೇನೆ ಆದರೆ ನನ್ನ ಮೀಸೆ ತೆಗೆಯುವುದಿಲ್ಲ" ಎಂದಿದ್ದಾರೆ.