ಬೆಂಗಳೂರು, ಜ 10 (DaijiworldNews/HR): ಮೇಕೆದಾಟು ಪಾದಯಾತ್ರೆಯಿಂದ ಕೊರೊನಾ ಹೆಚ್ಚಾಗಿ ಮತ್ತೆ ಲಾಕ್ಡೌನ್ ಆದರೆ ಅದಕ್ಕೆ ಕಾಂಗ್ರೆಸ್ನವರೇ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಜಾರಿ ಮಾಡುವುದಕ್ಕೆ ಆಗಲಿಲ್ಲ ಎಂದು ಕಾಂಗ್ರೆಸ್ ನಾಯಕರು ಮೊಣಕಾಲು ಮೇಲೆ ಕುಳಿತು, ಕಿವಿ ಹಿಡಿದುಕೊಂಡು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದರು.
ಇನ್ನು ನಾವು ಎಲ್ಲರ ವಿರುದ್ಧವೂ ನಾವು ಕ್ರಮ ತೆಗೆದುಕೊಳ್ಳುತ್ತವೆ. ನಾವು ಅಸಹಾಯಕರೂ ಅಲ್ಲ. ಅಸಮರ್ಥರೂ ಅಲ್ಲ. ಕಾನೂನು ರೀತಿಯಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದು, ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ 30 ಜನರ ವಿರುದ್ಧ ಈಗಾಗಲೇ ಎಫ್ ಐಆರ್ ದಾಖಲಿಸಲಾಗಿದೆ. ಮೊದಲು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ನಂತರ ತನಿಖೆ ಮಾಡಿ ಉಳಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.