ನವದೆಹಲಿ, ಜ 10 (DaijiworldNews/HR): ಹರಿದ್ವಾರದಲ್ಲಿ ಡಿ.17ರಿಂದ 20ರವರೆಗೆ ಧರ್ಮ ಸಂಸದ್ ಸಮಾರಂಭದಲ್ಲಿ ಭಾಗವಹಿಸಿದ್ದ ಹಲವು ಧಾರ್ಮಿಕ ಮುಖಂಡರು ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದರ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ನ್ಯಾಯಾಲಯಕ್ಕೆ ಸಲ್ಲಿರುವ ಅರ್ಜಿಗೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, "ನಾವು ಈ ವಿಷಯದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಇನ್ನು ಧರ್ಮ ಸಂಸದ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನಡೆದ ದ್ವೇಷದ ಭಾಷಣಗಳನ್ನು ವಿರೋಧಿಸಿದ ಕಪಿಲ್ ಸಿಬಲ್, 'ದೇಶದ ಘೋಷಣೆಗಳು ಸತ್ಯಮೇವ ಜಯತೆಯಿಂದ ಶಾಸ್ತ್ರಮೇವ ಜಯತೇ ಎಂದು ಬದಲಾಗಿದೆ' ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
"ಈ ಅರ್ಜಿಯನ್ನು ನಾವು ಪರಿಶೀಲಿಸುತ್ತೇವೆ. ಇದರ ವಿಚಾರಣೆ ನಡೆದಿಲ್ಲ. ಎಫ್ಐಆರ್ಗಳನ್ನು ಮಾತ್ರ ದಾಖಲಿಸಲಾಗಿದೆ" ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಇಸ್ಲಾಂನಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ಜಿತೇಂದ್ರ ನಾರಾಯಣ ತ್ಯಾಗಿ (ವಾಸಿಂ ರಿಜ್ವಿ) ಕೂಡ ಪಾಲ್ಗೊಂಡಿದ್ದರು. ಹರಿದ್ವಾರದಲ್ಲಿ ದ್ವೇಷಭಾಷಣದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಉತ್ತರಾಖಂಡ ಪೊಲೀಸರು ಜಿತೇಂದ್ರ ನಾರಾಯಣ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ನಾಯಕರ ವಿರುದ್ಧ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಕೂಡ ದೂರು ನೀಡಿದ್ದಾರೆ.