ಬೆಂಗಳೂರು, ಜ 10 (DaijiworldNews/HR): ಸಚಿವ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಬ್ಲ್ಯಾಕ್ ಮೇಲ್ ನೀಡಿದ ಪ್ರಕರಣದಲ್ಲಿ ನನ್ನ ಮಗಳ ಪಾತ್ರವಿಲ್ಲ, ಈ ಆರೋಪದ ಹಿಂದಿನ ಸತ್ಯಾಸತ್ಯತೆ ಬಯಲಾಗಬೇಕು ಎಂದು ವಿಜಯಪುರ ಜಿಲ್ಲೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.
ನಿಶಾಂತ್ ಅವರಿಗೆ ಬ್ಲ್ಯಾಕ್ ಮೇಲ್ ನೀಡಿದ ಪ್ರಕರಣದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಪುತ್ರಿಯ ಪಾತ್ರವಿದೆ ಎಂಬ ಸುದ್ದಿ ಹರಿದಾಟುತ್ತಿದ್ದು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, "ನನ್ನ ಮಗಳು ಎಂಎಸ್ ವಿದ್ಯಾಭ್ಯಾಸಕ್ಕಾಗಿ ಕಳೆದ ಮಾರ್ಚ್ ನಲ್ಲಿ ಯುಕೆಗೆ ಹೋಗಿದ್ದಾಳೆ. ಈ ಪ್ರಕರಣಕ್ಕೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ. ಜೊತೆಗೆ ಆಕೆಗೆ ನಿಶಾಂತ್ ಸೋಮಶೇಖರ್ ಪರಿಚಯವೂ ಇಲ್ಲ" ಎಂದರು.
ಇನ್ನು "ನಮ್ಮ ಪೊಲೀಸ್ ಅಧಿಕಾರಿಗಳ ಮೇಲೆ ನನಗೆ ವಿಶ್ವಾಸವಿದೆ. ಪ್ರಕರಣದ ಹಿನ್ನೆಲೆ ಏನು ? ನನ್ನ ಮಗಳನ್ನು, ನನ್ನ ಕುಟುಂಬವನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತರುತ್ತಿದ್ದಾರೆ. ಇದರ ಹಿಂದಿರುವವವರು ಯಾರು ? ಎಂಬುದರ ಕುರಿತು ಸಂಪೂರ್ಣ ತನಿಖೆಯಾಗಲಿ. ನಿಜಾಂಶ ಏನು ಎಂಬುದು ಬಹಿರಂಗವಾಗಬೇಕು" ಎಂದು ಆಗ್ರಹಿಸಿದ್ದಾರೆ.
"ಈ ಬಗ್ಗೆ ನಾನು ಸಚಿವ ಎಸ್.ಟಿ. ಸೋಮಶೇಖರ್ ಬಳಿಯೂ ಮಾತನಾಡಿದ್ದೇನೆ. ಅವರೂ ಕೂಡ ಪ್ರಕರಣದ ಹಿಂದಿನ ಷಡ್ಯಂತ್ರದ ಬಗ್ಗೆ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ಅವರು ನನ್ನ ಹಳೆ ಸ್ನೇಹಿತರು. ಯಾರೇ ಆಗಲಿ ರಾಜಕಾರಣ ಮಾಡುವುದಿದ್ದರೆ ನನ್ನ ಜತೆ ಮಾಡಲಿ, ರಾಜಕಾರಣ ಎಂದರೆ ನೇರಾನೇರ ಫೈಟ್ ಆಗಿರಬೇಕು ಹೊರತು ಯಾರೂ ಕೂಡ ಮಕ್ಕಳನ್ನು, ಕುಟುಂಬ ಸದಸ್ಯರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ" ಎಂದು ಹೇಳಿದ್ದಾರೆ.