ರಾಮನಗರ, ಜ.10 (DaijiworldNews/PY): ವೀಕೆಂಡ್ ಕರ್ಫ್ಯೂ ಆದೇಶ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ 35 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ವಾರಾಂತ್ಯದಲ್ಲಿ ಜಿಲ್ಲಾಡಳಿತವು, ಕನಕಪುರ ತಾಲೂಕಿನ ಸಂಗಮ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಹೇರಿತ್ತು. ಆದರೆ, ಆದೇಶ ಉಲ್ಲಂಘಿಸಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಾತನೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, "ನಿಯಮ ಉಲ್ಲಂಘಿಸಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗಿದೆ" ಎಂದಿದ್ದಾರೆ.
"ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ನಿಯಮ ಜಾರಿಗೆ ತಂದಿದ್ದರೂ, ವಿಪಕ್ಷ ಸ್ಥಾನದಲ್ಲಿದ್ದವರು ಉದ್ದೇಶಪೂರ್ವಕವಾಗಿ ಪಾದಯಾತ್ರೆ ಹೆಸರಿನಲ್ಲಿ ನಿಯಮ ಉಲ್ಲಂಘಿಸಿದ್ದೂ ಅಲ್ಲದೇ, ಜನರ ಹಿತದ ಬಗ್ಗೆ ಬೇಜವಾಬ್ದಾರಿ ತೋರಿರುವುದು ಸರಿಯಲ್ಲ" ಎಂದು ಹೇಳಿದ್ದಾರೆ.
"ಕಾನೂನು ಉಲ್ಲಂಘಿಸಿದವರು ಎಷ್ಟೇ ದೊಡ್ಡವರಿದ್ದರೂ ಅವರ ಮೇಲೆ ಕಾನೂನಿನ ಪ್ರಕಾರವೇ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.