ನವದೆಹಲಿ ಜ, 10 (DaijiworldNews/AN): ಸಂಸತ್ತಿನಲ್ಲಿ ಮುಂಬರುವ ಮಹತ್ವದ ಬಜೆಟ್ ಅಧಿವೇಶನದ ಕೆಲವೇ ದಿನಗಳ ಮುನ್ನ, ಸಂಸತ್ತಿನಲ್ಲಿ ಕೆಲಸ ಮಾಡುವ ಸುಮಾರು 400 ಸಿಬ್ಬಂದಿಗಳು ಕೊವೀಡ್ ಸೋಂಕಿಗೆ ತುತ್ತಾಗಿದ್ದಾರೆ. ಜನವರಿ 4 ಮತ್ತು 8 ರ ನಡುವೆ ನಡೆದ ಕೋವಿಡ್ ಪರೀಕ್ಷೆಯಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಇವರಲ್ಲಿ 65 ಮಂದಿ ರಾಜ್ಯಸಭಾ ಸೆಕ್ರೆಟರಿಯೇಟ್ನಲ್ಲಿ 200 ಮಂದಿ ಲೋಕಸಭೆ ಸೆಕ್ರೆಟರಿಯೇಟ್ನಲ್ಲಿ ಮತ್ತು 133 ಮಂದಿ ಮಿತ್ರ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಜನವರಿ ಕೊನೆಯ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಇದರ ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯಸಭಾ ಸಚಿವಾಲಯವು ಸಿಬ್ಬಂದಿಗಳ ಹಾಜರಾತಿಯನ್ನು ಶೇ.50ರಷ್ಟು ವಿಧಿಸಿದ್ದು, ಉಳಿದ ಎಲ್ಲಾ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡಬೇಕಾಗುತ್ತದೆ.
ಇನ್ನು ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.