ರಾಮನಗರ, ಜ 10 (DaijiworldNews/HR): ನಿಮ್ಮ ಹೊಟ್ಟೆ ತಣ್ಣಗಾಗೋದಾದ್ರೆ ನನ್ನನ್ನು ಜೈಲಿಗೆ ಕಳಿಸಿ. ಆದರೆ ಮೇಕೆದಾಟು ಹೋರಾಟ ಮುಗಿಯುವವರೆಗೂ ನಾನು ಮನೆಯಲ್ಲಿ ಮಲಗಲ್ಲ ಎಲ್ಲರ ಮೇಲೂ ಕೇಸ್ ಹಾಕಿದ್ರೂ ಹೆದರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
16 ಕಿ.ಮಿ ಸಂಚರಿಸಿ ದೊಡ್ಡ ಆಲಹಳ್ಳಿ ಗ್ರಾಮಕ್ಕೆ ಬಂದು ತಲುಪಿದ್ದು, ತನ್ನ ಹುಟ್ಟೂರಿನಲ್ಲಿ ಸ್ವಂತ ಮನೆ ಇದ್ದರೂ ಕೂಡ ಡಿಕೆಶಿ ಮನೆಯಲ್ಲಿ ಮಲಗದೇ ಶಾಲೆಯಲ್ಲೇ ಮಲಗಿದ್ದರು. ಇಂದು ಬೆಳಗ್ಗೆ 8.30ರ ಸುಮಾರಿಗೆ 30ಕ್ಕೆ 2ನೇ ದಿನದ ಪಾದಯಾತ್ರೆ ಮುಂದುವರೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಸರ್ಕಾರ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ ನಾನು ಈ ಹೋರಾಟ ಮುಗಿಯುವವರೆಗೂ ಮನೆಯಲ್ಲಿ ಮಲಗುವುದಿಲ್ಲ. ಸರ್ಕಾರ ಎಷ್ಟೇ ಒತ್ತಡ ತಂದರೂ ನಾವು ಅದಕ್ಕೆ ಹೆದರುವುದಿಲ್ಲ. ನಾವು ಈ ಕ್ಷೇತ್ರಕ್ಕೆ ರಸ್ತೆಯಿಂದ ಹಿಡಿದು ಎಲ್ಲ ಕೆಲಸ ಮಾಡಿದ್ದೇವೆ" ಎಂದರು.
ಇನ್ನು ಇದೇ ಸಂದರ್ಭದಲ್ಲಿ ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು ಎಂದ ಅವರು, ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡಿದ್ದು, ನನ್ನನ್ನು ತಿಹಾರ್ ಜೈಲಿಗೆ ಹಾಕಿದ ಹಿನ್ನೆಲೆ ಗಡ್ಡ ಬಿಟ್ಟಿದ್ದೇನೆ. ಈ ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು ಎಂದು ಹೇಳಿದ್ದಾರೆ.