ಬೆಂಗಳೂರು, ಡಿ 10 (DaijiworldNews/MS): ದೇಶದಲ್ಲಿ ಕೋವಿಡ್ ಸೋಂಕು ಮತ್ತುಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮೂರನೇ ಅಲೆಯ ಆತಂಕದ ನಡುವೆಯೇ ಇಂದಿನಿಂದ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ ಆರಂಭಗೊಳ್ಳಲಿದೆ. ಆರಂಭಿಕ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ವೃದ್ದರಿಗೆ ಮುನ್ನೆಚ್ಚರಿಕೆಯ ಡೋಸ್ ಲಭ್ಯವಾಗಲಿದೆ.
ಕಳೆದ ಶುಕ್ರವಾರದಿಂದಲೇ ಕೋವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ. ಅದರೂ ಮುನ್ನೆಚ್ಚರಿಕೆಯ ಲಸಿಕೆ ಡೋಸ್ಗಳಿಗೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಬೂಸ್ಟರ್ ಡೋಸ್ ಗೆ ಅರ್ಹರು ನೇರವಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂತಹ ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ "ವೈದ್ಯರ ಸಲಹೆ"ಯ ಮೇರೆಗೆ ಮುನ್ನೆಚ್ಚರಿಕೆ ಡೋಸ್ ಅನ್ನು ಪಡೆದುಕೊಳ್ಳಬೇಕಾಗುತ್ತದೆ. ಮುಂಚೂಣಿ ಕಾರ್ಯಕರ್ತರಲ್ಲದೇ ಪಂಚ ರಾಜ್ಯ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರನ್ನಾಗಿ ಪರಿಗಣಿಸಿರುವುದರಿಂದ ಅವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ.
ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿದಂತೆ ಎರಡು ಡೋಸ್ ಲಸಿಕೆ ಪಡೆದಿರಬೇಕು. ಮುನ್ನೆಚ್ಚರಿಕೆಯ ಡೋಸ್ ಪಡೆಯುವವರು ಎರಡನೇ ಡೋಸ್ ಪಡೆದು 9 ತಿಂಗಳು (39 ವಾರ) ಆಗಿರಬೇಕು. ಸಂಪೂರ್ಣ ವಾಕ್ಸಿನ್ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಬೇಕು. ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು.ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್ ಆಗಿ ಕೋವ್ಯಾಕ್ಸಿನ್ ಲಸಿಕೆಯನ್ನೇ ಪಡೆಯಬೇಕಾಗುತ್ತದೆ.