ಬೆಂಗಳೂರು, ಜ 09 (DaijiworldNews/HR): ತುರ್ತು ಆರೋಗ್ಯದ ಸಂದರ್ಭದಲ್ಲೂ ಜನರನ್ನು ಮರಳು ಮಾಡುವುದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ದೊಡ್ಡ ನಾಟಕ ಮಾಡುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಸಭೆಗಳನ್ನು ನಡೆಸಿ ಅಂತಿಮ ಹಂತಕ್ಕೆ ತಂದಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಇದು ಆರಂಭವಾಗುತ್ತದೆ ಎಂದು ಅರಿತು ಕಾಂಗ್ರೆಸ್ನವರು ದೊಡ್ಡ ನಾಟಕವಾಡುತ್ತಿದ್ದಾರೆ" ಎಂದರು.
ಇನ್ನು ಈ ಪಾದಯಾತ್ರೆಗೆ ಪಾಲ್ಗೊಂಡು ಆರೋಗ್ಯ ಸಮಸ್ಯೆಗೆ ಎದುರಾಗುವವರಿಗೆ ನನ್ನ ಸಹಾನುಭೂತಿಯಿದ್ದು, ಅವರ ಆರೋಗ ಕಾಪಾಡುವ ದೃಷ್ಟಿಯಿಂದ ಆರೈಕೆ ಮಾಡಲು ಸರ್ಕಾರ ಕಾಳಜಿ ವಹಿಸಲಿದೆ ಎಂದು ವ್ಯಂಗ್ಯವಾಡಿದ್ದಾರೆ.