ಬೆಂಗಳೂರು, ಜ.09 (DaijiworldNews/PY): ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಪಾದಯಾತ್ರೆಯಿಂದ ವಾಪಾಸ್ ಆಗಿದ್ದಾರೆ.
ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದ ಸಂದರ್ಭ ಸಿದ್ದರಾಮಯ್ಯ ಅವರು ಉತ್ಸುಕರಾಗಿ ನಡೆದಿದ್ದರು. ಪಾದಯಾತ್ರೆ ಆರಂಭಗೊಂಡ ನಾಲ್ಕೇ ಕಿಲೋಮೀಟರ್ ನಡೆಯುತ್ತಲೇ ಸುಸ್ತಾಗಿದ್ಧಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿಯಿಂದ ಜ್ವರದಿಂದ ಬಳಲುತ್ತಿದ್ದರೂ, ಈ ನಡುವೆಯೂ ಅವರು ಪಾದಯಾತ್ರೆ ಮಾಡಿದ್ದಾರೆ. ಹಾಗಾಗಿ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ವಿಶ್ರಾಂತಿ ಪಡೆದು, ವೈದ್ಯರಿಂದ ಪರೀಕ್ಷೆಗೆ ಒಳಪಟ್ಟು, ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, "ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ.ಸಿದ್ಧರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ.ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು" ಎಂದಿದ್ದಾರೆ.