ಭೋಪಾಲ್, ಜ, 09 (DaijiworldNews/AN): ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಮಹಿಳೆಯರಿಬ್ಬರು ನರ್ಮದಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಭೋಪಾಲ್ ನಗರದಲ್ಲಿ ನಡೆದಿದೆ.
ಮೃತರನ್ನು ಮುಂಬೈ ನಿವಾಸಿ ಹಂಸಾ ಸೋನಿ(50) ಹಾಗೂ ಆಕೆಯ ಸೊಸೆ ರಿಧಿ ಪಿಚಾಡಿಯಾ(22) ಎಂದು ಗುರುತಿಸಲಾಗಿದೆ.
ಈ ಕುರಿತು ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ, "ಮುಂಬೈ ನಿವಾಸಿಗಳಾದ ಹಂಸಾ ಸೋನಿ ಕುಟುಂಬ ಭೇರಘಾಟ್ಗೆ ಭೇಟಿ ನೀಡಲು ಬಂದಿದ್ದು, ಅಲ್ಲೇ ಹತ್ತಿರದ ಹೋಟೆಲೊಂದರಲ್ಲಿ ಉಳಿದಿದ್ದರು. ಶುಕ್ರವಾರ ಸಂಜೆ, ಭೇರಘಾಟ್ಗೆ ಭೇಟಿ ನೀಡಲು ಹೋದ ಸಂದರ್ಭದಲ್ಲಿ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಹಂಸ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದು, ಅವಳನ್ನು ರಕ್ಷಿಸುವ ಸಲುವಾಗಿ ರಿಧಿ ಹಾರಿದ್ದಾಳೆ. ಸ್ಥಳೀಯ ಈಜುಗಾರರ ಸಹಾಯದಿಂದ ಶೋಧನೆ ನಡೆಸಿದಾಗ ಶುಕ್ರವಾರ ಹಂಸಾ ಸೋನಿ ಶವ ಪತ್ತೆಯಾಗಿದ್ದು, ಶನಿವಾರ ರಿಧಿಯ ಶವ ಪತ್ತೆಯಾಗಿದೆ" ಎಂದು ಹೇಳಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂದವರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ಧಾರೆ.
ಈ ಹಿಂದೆಯೂ ಭೇರ್ಘಾಟ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಾಲಕ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಜಿಲ್ಲಾಡಳಿತವು ಸ್ಥಳದಲ್ಲಿ ಸೆಲ್ಫಿ ನಿಷೇಧಿಸಿ ಎಚ್ಚರಿಕೆ ಫಲಕ ಹಾಕಿದ್ದು, ರಕ್ಷಣಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.