ಬೆಂಗಳೂರು, ಜ.09 (DaijiworldNews/PY): "ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ವೇಳೆ ಮೇಕೆದಾಟು ಯೋಜನೆಗಾಗಿ ಏನೂ ಮಾಡದ ಕಾಂಗ್ರೆಸ್ ಈಗ ಅಪರಾಧಿ ಮನೋಭಾವದಿಂದ ಪಾದಯಾತ್ರೆ ಮಾಡುತ್ತಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ಧಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ ಕೆ ಶಿವಕುಮಾರ್ ಅವರು ಜನಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಈ ಯೋಜನೆ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ಮಾತ್ರವೇ ಸಿದ್ದಪಡಿಸಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಸಾರ್ವಜನಿಕರಿಗೆ ಪ್ರಶ್ನೆ ಮೂಡಿದೆ. ಈ ವಿಚಾರದಲ್ಲಿ ಕೈ ಮುಖಂಡರಿಗೆ ಬದ್ದತೆ ಇಲ್ಲ. ಅಧಿಕಾರದ ಅವಧಿಯಲ್ಲಿ ಕೆಲಸ ಮಾಡದೇ ಇರುವುದಕ್ಕೆ ಅಪರಾಧಿ ಮನೋಭಾವ ಕಾಡುತ್ತಿದೆ. ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.
"ಮೇಕೆದಾಟು ಯೋಜನೆಯ ಸಂಬಂಧ ತೆಗೆದುಕೊಳ್ಳಬೇಕಾಗಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಮಾಡುತ್ತಿದೆ. ಈ ಹಿಂದೆ ಯೋಜನಾ ಪ್ರದೇಶಕ್ಕೆ ರೈತ ಸಂಘಟನೆಯವರು ಭೇಟಿ ನೀಡಿದ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಯೋಜನೆಯ ಸಂಬಂಧಪಟ್ಟ ಎಲ್ಲಾ ಪ್ರತಿಕ್ರಿಯೆಗಳಿಗೂ ತಡೆ ನೀಡಿತ್ತು. ಕಾಂಗ್ರೆಸ್ನವರಿಗೆ ಜನರಿಗಿಂತ ರಾಜಕೀಯವೇ ಮುಖ್ಯವಾಗಿದೆ" ಎಂದಿದ್ಧಾರೆ.