ಗುರುಗ್ರಾಮ್ ಜ, 09 (DaijiworldNews/AN): ನವಜಾತ ಶಿಶುಗಳನ್ನು ಅಪಹರಿಸಿ ನೆರೆ ರಾಜ್ಯಗಳಿಗೆ ಸಾಗಾಣಿಕೆ ಮಾಡುತ್ತಿದ್ದವರ ಪತ್ತೆಗೆ ಗುರುಗ್ರಾಮ್ ಪೊಲೀಸರಿಗೆ ಟ್ಯಾಕ್ಸಿ ಚಾಲಕನೋರ್ವ ಸಹಾಯ ಮಾಡಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಸುರೇಂದರ್ ಕೌರ್(44), ನೇಹಾ(37) ಮತ್ತು ಹರ್ಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಗುರುಗ್ರಾಮದ ನಾಥುಪುರ ನಿವಾಸಿ ಚಾಲಕ ಉಮೇಶ್ ಲೋಹಿಯಾ(35) ಎಂಬಾತ ವ್ಯಕ್ತಿಯೋರ್ವನ ದೂರವಾಣಿ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದಾನೆ. ವ್ಯಕ್ತಿಯೋರ್ವ ಎರಡು ನವಜಾತ ಶಿಶುಗಳನ್ನು ಕರೆದೊಯ್ದಿದ್ದು, ಒಂದನ್ನು 2.4 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ.
ಇದನ್ನು ಅರಿತ ಟ್ಯಾಕ್ಸಿ ಚಾಲಕ ಎರಡು ನವಜಾತ ಹೆಣ್ಣು ಶಿಶುಗಳೊಂದಿಗೆ ತನ್ನ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಅಂತರಾಜ್ಯ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಅನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದಾನೆ.
ಈ ತಂಡವು ದೆಹಲಿಯ ಆಸ್ಪತ್ರೆಗಳಿಂದ ಶಿಶುಗಳನ್ನು ಕದ್ದು ನೆರೆಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ವಿವಿಧ ಸ್ಥಳಗಳಿಂದ ನವಜಾತ ಶಿಶುಗಳನ್ನು ಅಪಹರಿಸಿ ಹಣ ಸಂಪಾದಿಸುವ ಉದ್ದೇಶವಾಗಿದ್ದು, ಸುಮಾರು 8 ವರ್ಷಗಳಿಂದ ಕಳ್ಳ ಸಾಗಾಣಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ತನಿಖೆಯ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳು ದೆಹಲಿಯ ಆಸ್ಪತ್ರೆಗಳಿಂದ ಶಿಶುಗಳನ್ನು ಅಪಹರಿಸುತ್ತಿದ್ದು, ಅವುಗಳನ್ನು ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡಲಾಗಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಈ ದಂಧೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳ ಕೈವಾಡವೂ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಪಹರಿಸಿದ 20-25 ದಿನಗಳ ಎರಡು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತರು ಟ್ಯಾಕ್ಸಿ ಚಾಲಕನಿಗೆ 25,000 ರೂ. ಹಾಗೂ ಪ್ರಸಂಶನ ಪತ್ರವನ್ನು ಘೋಷಿಸಿದ್ದಾರೆ.