ಬೆಂಗಳೂರು, ಜ.09 (DaijiworldNews/PY): "ಕೈ ನಾಯಕರು ಹಠ ಬಿಟ್ಟು ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು. ಯಾರೇ ನಿರ್ಬಂಧ ಉಲ್ಲಂಘಿಸಿದಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು" ಎಂದು ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ಯೋಜನೆಗೆ ಸಂಬಂಧಿಸಿ ವ್ಯಾಜ್ಯ ಸುಪ್ರೀಂಕೋರ್ಟ್ನಲ್ಲಿದೆ. ಕಾಂಗ್ರೆಸ್ಸಿಗರು ಸರ್ಕಾರ ನಡೆಸಿದವರು, ಅವರು ಜವಾಬ್ದಾರಿಯಿಂದ ವರ್ತಿಸಬೇಕು" ಎಂದಿದ್ದಾರೆ.
"ಅನಾರೋಗ್ಯ ಬಂದ ನಂತರ ಸಮಸ್ಯೆ ಎದುರಿಸುವುದಕ್ಕಿಂತ ಬಾರದಂತೆ ನಿಯಂತ್ರಿಸುವುದು ಅತ್ಯುತ್ತಮವಾದ ಪ್ರಯತ್ನ. ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದೆ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ನಿರ್ಬಂಧಗಳನ್ನು ಉಲ್ಲಂಘಿಸಿದವರ ವಿರುದ್ದ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲೇಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯು ಜಾರಿ ಸಂದರ್ಭ ಪೊಲೀಸರು ಅತ್ಯಂತ ಸಹನೆಯಿಂದ ವರ್ತಿಸುವುದು ಮುಖ್ಯ. ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.