ಉತ್ತರ ಪ್ರದೇಶ ಜ. 08 (DaijiworldNews/AN): "ಡಿಜಿಟಲ್ ಪ್ರಚಾರದಲ್ಲಿ ಅತ್ಯುತ್ತಮ ಸೌಲಭ್ಯವನ್ನು ಹೊಂದಿದ ಬಿಜೆಪಿ ಪಕ್ಷದಂತೆ ಎಲ್ಲಾ ಪಕ್ಷಗಳಿಗೆ ಸವಲತ್ತು ಹೊಂದಲು ಹಾಗೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ" ಎಂದು ಸಮಾಜವಾದಿ ಪಕ್ಷದ (ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಶನಿವಾರ ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಜಿಟಲ್ ಪ್ರಚಾರ ನಡೆಸಲು ಎಸ್ಪಿಯ ಸಿದ್ಧತೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿ "2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ವರ್ಚುವಲ್ ಪ್ರಚಾರದ ಪರವಾಗಿ ಒಲವು ತೋರಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ಆಯೋಗವು ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನವಾದ ಸೌಲಭ್ಯವನ್ನು ಒದಗಿಸಿಕೊಡಬೇಕು" ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸರ್ಕಾರದಿಂದ ಸ್ವಲ್ಪ ಹಣವನ್ನು ನೀಡಬೇಕು, ಇದರಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಂದು ಹೆಜ್ಜೆ ಮುಂದಡಿ ಇಡಲು ಸಹಾಯವಾಗುತ್ತದೆ. ಬಿಜೆಪಿಯಲ್ಲಿರುವ ಡಿಜಿಟಲ್ ಮೂಲಸೌಕರ್ಯದೊಂದಿಗೆ ನಮಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದ್ದರಿಂದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸರ್ಕಾರದಿಂದ ಸ್ವಲ್ಪ ಹಣವನ್ನು ನೀಡಬೇಕು ಎಂದು ನಾವು ಮನವಿ ಮಾಡುತ್ತೇವೆ, ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯಂತಹ ಪ್ರಬಲ ಸಂಘಟನೆಯನ್ನು ಹೊಂದಿರದ ಎಲ್ಲಾ ರಾಜಕೀಯ ಪಕ್ಷಗಳು ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.