ನವದೆಹಲಿ: ಡಿ 08 (DaijiworldNews/MS): ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಬಹುನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಜ.8 ರ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಚಂದ್ರ ಅವರು ವೇಳಾಪಟ್ಟಿ ಪ್ರಕಟಿಸಿದರು.
ಫೆ.10 ರಿಂದ ಏಳು ಹಂತಗಳಲ್ಲಿ ಪಂಚರಾಜ್ಯದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 10ನೇ ಫೆಬ್ರವರಿಯಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಫೆಬ್ರವರಿ 14 ರಂದು ಮತ್ತು ಮಣಿಪುರದಲ್ಲಿ ಫೆಬ್ರವರಿ 27 ಮತ್ತು 3 ರಂದು ಮತದಾನ ನಡೆಯಲಿದ್ದು ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ
ಒಟ್ಟಾರೆ 690 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ 403, ಪಂಜಾಬ್ನಲ್ಲಿ 117, ಉತ್ತರಾಖಂಡದಲ್ಲಿ 70, ಮಣಿಪುರದಲ್ಲಿ 60 ಮತ್ತು ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅಂಚೆ ಮತಪತ್ರ:
ಈ ಬಾರಿ ಕೇಂದ್ರ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಕೋವಿಡ್ 19 ರೋಗಿಗಳು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡಿದೆ.
ನೀತಿ ಸಂಹಿತೆ ಜಾರಿ:
ವೇಳಾಪಟ್ಟಿಗಳ ಪ್ರಕಟಣೆಯಾದ ಇಂದಿನಿಂದಲೇ ಮಾದರಿ ನೀತಿ ಸಂಹಿತೆ (MCC) ತಕ್ಷಣವೇ ಜಾರಿಗೆ ಬರುತ್ತದೆ. ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಈ ಮಾರ್ಗಸೂಚಿಗಳ ಯಾವುದೇ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ವ್ಯವಹರಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯಕ್ತ ಎಚ್ಚರಿಕೆ ನೀಡಿದ್ದಾರೆ.