ತೆಲಂಗಾಣ, ಜ 08 (DaijiworldNews/PY): ತೆಲಂಗಾಣದ ಕೋತಗುಡೆಂ ಜಿಲ್ಲೆಯಲ್ಲಿ ಉದ್ಯಮಿ ಹಾಗೂ ಆತನ ಕುಟುಂಬದ ಮೂವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಟಿಆರ್ಎಸ್ ಶಾಸಕ ವೆಂಕಟೇಶ್ವರ ರಾವ್ ಅವರ ಪುತ್ರ ರಾಘವೇಂದ್ರ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
"ಈ ಕುರಿತು ಪೊಲೀಸರು ರಾಘವೇಂದ್ರ ರಾವ್ ಅನ್ನು ವಿಚಾರಿಸುತ್ತಿದ್ದು, ಅವರ ವಿರುದ್ದ ಈ ಹಿಂದೆ ದಾಖಲಾಗಿರುವ ಇತರ ಪ್ರಕರಣಗಳ ಕುರಿತು ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ಧಾರೆ.
ಜನವರಿ 3ರಂದು ಪಲೋಂಚ ಪಟ್ಟಣದಲ್ಲಿ ಉದ್ಯಮಿ ರಾಮಕೃಷ್ಣ ಅವರು ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಮೃತರು ಶಾಸಕರ ಮಗ ತನ್ನ ಪತ್ನಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ಧಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ರಾಘವೇಂದ್ರ ವಿರುದ್ದ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಅಂದಿನಿಂದ ತಲೆಮರೆಸಿಕೊಂಡಿದ್ದರು.
ಘಟನೆಯ ಸಂಬಂಧ ರಾಘವೆಂದ್ರ ಬಂಧನಕ್ಕೆ ಒತ್ತಾಯಿಸಿ ಟ್ವೀಟ್ ಮಾಡಿರುವ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ರೇವಂತ್ ರೆಡ್ಡಿ, "ತನ್ನ ಬಳಿಗೆ ರಾಮಕೃಷ್ಣನ್ ಪತ್ನಿಯನ್ನು ಕಳುಹಿಸಿ ಎಂದು ರಾಘವೇಂದ್ರ ಪೀಡಿಸುತ್ತಿದ್ದ. ಕುಟುಂಬದೊಂದಿದೆ ರಾಮಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ವಿಡಿಯೋ ನೋಡಿದರೆ ಅವರ ದೌರ್ಜನ್ಯ ಎಂತದ್ದು ಎಂದು ತಿಳಿಯುತ್ತದೆ. ಇವರನ್ನು ತಕ್ಷಣವೇ ಬಂಧಿಸಿ ಹಾಗೂ ಪಕ್ಷದಿಂದ ಅಮಾನತುಗೊಳಿಸಿ" ಎಂದು ಆಗ್ರಹಿಸಿದ್ದರು.