ಬೆಂಗಳೂರು , ಡಿ 08 (DaijiworldNews/MS): ರಾಜ್ಯಾದ್ಯಂತ ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಸೂಚಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ "ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 14,500 ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ. ಅವರಿಗೆ ಮಾಸಿಕ 11,000 ರಿಂದ 13,000 ಗೌರವ ಧನ ನೀಡಲಾಗುತ್ತಿದೆ. ಇದು ಸರಕಾರವೇ ನಿಗದಿ ಮಾಡಿರುವ ಮೂಲ ವೇತನಕ್ಕಿಂತ ಕಡಿಮೆ’ ಎಂದಿದ್ದಾರೆ.
‘ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ. ಭಾರತ ವಿಶ್ವಗುರು ಆಗಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವರು. ಸ್ವತಃ ಪ್ರಧಾನಿಯವರು ಇದೇ ಮಾತು ಹೇಳುತ್ತಿದ್ದಾರೆ. ವಿಶ್ವಗುರು ಆಗಬೇಕು ಎಂದರೆ ಅತ್ಯಂತ ಕನಿಷ್ಠ ಸಂಬಳಕ್ಕೆ ಉಪನ್ಯಾಸಕರನ್ನು ದುಡಿಸಿಕೊಳ್ಳುವುದೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
‘ಕಳೆದ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹ ಮಾಡುತ್ತೇನೆ’ ಎಂದಿದ್ದಾರೆ.