ಬೆಂಗಳೂರು, ಜ 08 (DaijiworldNews/PY): "ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ. ನಿಷೇಧಾಜ್ಞೆ ವಿಧಿಸಿದ್ದಲ್ಲಿ ಐದೈದು ಮಂದಿ ಹೋಗಿ ಮಾಡುತ್ತೇವೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ನಿಯಮ ಪಾಲಿಸಿಕೊಂಡು ನಾವು ಪಾದಯಾತ್ರೆ ಮಾಡುತ್ತೇವೆ. ಏಕೆ ರಾಮನಗರಕ್ಕೆ ಮಾತ್ರ ನಿಷೇದಾಜ್ಞೆ ಹಾಕಿದ್ದಾರೆ. ಇದು ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ" ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
"ಬಿಜೆಪಿ ಸರ್ಕಾರ ಎರಡೂವರೆ ವರ್ಷದಿಂದ ಏನೂ ಮಾಡಿಲ್ಲ. ಸುಳ್ಳು ಜಾಹೀರಾತು ನೀಡಿ ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿದೆ. ಬಿಜೆಪಿ ಸರ್ಕಾರ, ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ" ಎಂದಿದ್ದಾರೆ.
"ಗೋವಿಂದ ಕಾರಜೋಳ ಅವರು 2008ರಿಂದ ಮಂತ್ರಿ ಆಗಿದ್ದರು. ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಅವರು ಏನು ಕೆಲಸ ಮಾಡಿದ್ದಾರೆ?. ಸರ್ಕಾರ ಅನಗತ್ವಾದ ಗೊಂದಲ ಸೃಷ್ಟಿಸಲು 144 ಸೆಕ್ಷನ್ ಹಾಕಿದೆ. 15 ಮಂದಿ ಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಎಂದು ಕಾರಜೋಳ ಹೇಳಿದ್ದಾರೆ. 15 ಜನ ನಡೆದರೆ 144 ಸೆಕ್ಷನ್ ಉಲ್ಲಂಘನೆ ಆಗುವುದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಹಾಗಾಗಿ ಅವರು ಏನೇನೋ ಮಾತನಾಡುತ್ತಾರೆ. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ" ಎಂದಿದ್ದಾರೆ.