ಬೆಂಗಳೂರು, ಡಿ 08 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಕನಕಪುರಕ್ಕೆ ಆಗಮಿಸಿದ್ದು ಮೇಕೆದಾಟು ಪಾದಯಾತ್ರೆ ಯಶಸ್ವಿಗೆ ಪ್ರಾರ್ಥಿಸಿ ದೇಗುಲಗಳ ಭೇಟಿ ಕೈಗೊಂಡಿದ್ದಾರೆ.
ದೇವಾಲಯದ ಭೇಟಿ ಬಳಿಕ "ಮೇಕೆದಾಟು ಪಾದಯಾತ್ರೆಗೆ ಬಲ ತುಂಬಲು ಶಕ್ತಿ ದೇವತೆಗಳ ಆಶೀರ್ವಾದ ತುಂಬಾ ಮುಖ್ಯ. ಇಂದು ಗಾಂಧಿನಗರದಲ್ಲಿರುವ ಬೆಂಗಳೂರು ನಗರ ದೇವತೆ ಶ್ರೀ ಅಣ್ಣಮ್ಮ ದೇವಿಯ ದರ್ಶನ ಪಡೆದು ನಾವು ಕೈಗೊಂಡಿರುವ ಜನಪರ ಕಾರ್ಯ ಸಿದ್ಧಿಗೊಳಿಸಮ್ಮ ಎಂದು ಪ್ರಾರ್ಥಿಸಿದೆ" ಎಂದು ಹೇಳಿದ್ದಾರೆ . ಮನೆ ದೇವರು ಕೆಂಕೇರಮ್ಮ ಕಬ್ಬಾಳಮ್ಮ, ಸಂಗಮ ಬಳಿಯ ಈಶ್ವರನ ಸನ್ನಿಧಿಗೂ ಭೇಟಿ ನೀಡಲಿದ್ದಾರೆ.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ " ನಾವು ಮಾಡುತ್ತಿರುವ ಮೇಕೆದಾಟು ಪಾದಯಾತ್ರೆ ಪ್ರತಿಭಟನೆಯಲ್ಲ. ಜನಾಂದೋಲನ. ಸರ್ಕಾರ ಯಾವುದೇ ನಿರ್ಬಂಧ ವಿಧಿಸಿದರೂ ನೀರಿನ ಹಕ್ಕಿಗಾಗಿ ನಮ್ಮ ನಡೆ ನಿಲ್ಲದು" ಎಂದರು.
ಕೋವಿಡ್ ಕರ್ಪ್ಯೂ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ, 'ಎಲ್ಲಿದೆ ರಾಜ್ಯದಲ್ಲಿ ಕೊರೊನಾ ? ಯಾರೊಬ್ಬರಾದರೂ ಐಸಿಯು ನಲ್ಲಿ ಮಲಗಿದ್ದಾರ? ರಾಜಕೀಯಕೋಸ್ಕರ ಯಾಕೆ ಸುಮ್ಮನೆ ಕಿರುಕುಳ ಕೊಡುತ್ತೀರ' ಎಂದು ಅವರು ಪ್ರಶ್ನಿಸಿದರು.
'ಲಾಕ್ಡೌನ್ ಘೋಷಿಸಲು ರಾಜ್ಯ ಸರ್ಕಾರದ ಬಳಿ ವೈಜ್ಞಾನಿಕ ಕಾರಣಗಳೇ ಇಲ್ಲ. ನಿನ್ನೆ ರಾಜ್ಯದ ಪಾಸಿಟಿವಿಟಿ ದರ (ಟಿಪಿಆರ್) 3.95ರಷ್ಟಿತ್ತು. ಶೇ. 5 ತಲುಪಿದರೆ ಲಾಕ್ಡೌನ್ ಘೋಷಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಕಳೆದ ವರ್ಷ ಪಾಸಿಟಿವಿಟಿ ದರ 32.89%ರಷ್ಟು ತಲುಪಿದಾಗ ಲಾಕ್ಡೌನ್ ಘೋಷಿಸಲಾಗಿತ್ತು ಜಿಲ್ಲಾಡಳಿತ ಎಲ್ಲ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿದೆ. ಕೇಸ್ ಹಾಕೋ ಹಾಕಿದ್ದರೆ ಎಲ್ಲರ ಮೇಲೂ ಹಾಕಲಿ' ಎಂದರು.