ಕಾನ್ಪುರ ಜ.08 (DaijiworldNews/AN): ಗರ್ಭಿಣಿಯಾಗಿದ್ದ ಅಪ್ರಾಪ್ತ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಹಿನ್ನಲೆಯಲ್ಲಿ ತಾಯಿ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಚೌಬೇಪುರ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ "ಅಪ್ರಾಪ್ತ ಬಾಲಕಿಯೂ ಗರ್ಭಿಣಿಯಾಗಿದ್ದು, ಅನ್ಯ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಇದನ್ನರಿತ ತಾಯಿ ಸಮಾಜದಲ್ಲಿ ತಮ್ಮ ಗೌರವಕ್ಕೆ ಕುಂದು ಬರುತ್ತೆ ಎಂದು ಮಗನೊಂದಿಗೆ ಸೇರಿ, ಮಗಳನ್ನು ಕತ್ತು ಹಿಸುಕಿ ಹತ್ಯೆ ನಡೆಸಿ, ಬಳಿಕ ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಯತ್ನಿಸಿದ್ದಾರೆ''.
ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಾಲಕಿಯ ಹತ್ಯೆ ಮಾಡಿರುವ ಮಾಹಿತಿ ಬಹಿರಂಗವಾಗಿದ್ದು, ಈ ಹಿನ್ನಲೆಯಲ್ಲಿ ಆರೋಪಿಗಳನ್ನು ಹಾಗೂ ಅತ್ಯಾಚಾರ ಆರೋಪದ ಮೇಲೆ ಅಪ್ರಾಪ್ತ ಸಂತ್ರಸ್ತೆಯ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಮೊದಲಿಗೆ ಅಪ್ರಾಪ್ತ ಬಾಲಕಿಯ ಮನವೊಲಿಸಲು ಪ್ರಯತ್ನಿಸಿದ್ದರು ಮತ್ತು ಅನ್ಯ ಜಾತಿಯ ವ್ಯಕ್ತಿಯೊಂದಿಗೆ ಸಂಬಂಧವನ್ನು ಕೊನೆಗೊಳಿಸುವಂತೆ ಕೇಳಿಕೊಂಡರು, ಆದರೆ ಆಕೆ ಇದನ್ನು ನಿರಾಕರಿಸಿದ್ದು ಈ ಘಟನೆ ಕಾರಣವಾಗಿದೆ.” ಎಂದು ಪೊಲೀಸ್ ಠಾಣೆ ಪ್ರಭಾರಿ ಕೃಷ್ಣ ಮೋಹನ್ ರಾಯ್ ಹೇಳಿದ್ದಾರೆ.