ಬೆಂಗಳೂರು , ಡಿ 08 (DaijiworldNews/MS): ರಾಜಕೀಯ ರಂಗು ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಕೋವಿಡ್ ಕರಿ ನೆರಳಿನಲ್ಲಿ ಜನವರಿ 9ರ ಭಾನುವಾರ ಆರಂಭವಾಗಲಿದೆ . ಈ ನಡುವೆ "ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಘಟಕ " ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಾಕಿ ಇದೆ.ಈ ಹಂತದಲ್ಲಿ ಯೋಜನೆ ಜಾರಿಗೆ ಮುಂದಾಗುವುದು, ಜಾರಿಗಾಗಿ ಒತ್ತಡ ಹೇರುವುದು ನ್ಯಾಯಾಂಗ ನಿಂದನೆಯಲ್ಲವೇ?ಈ ಕನಿಷ್ಠ ಪ್ರಜ್ಞೆಯೂ ಕಾಂಗ್ರೆಸ್ ನಾಯಕರಿಗಿಲ್ಲವೇ? ಸೆಕ್ಷನ್ ಸಿದ್ದರಾಮಯ್ಯ ಈ ವಿಚಾರದಲ್ಲೂ ಬುರುಡೆ ಬಿಡುತ್ತಾರಾ?" ಎಂದು ಕುಹಕವಾಡಿದೆ.
"ಅಂತಾರಾಜ್ಯ ಜಲ ವಿವಾದ ಒಂದು ಸೂಕ್ಷ್ಮ ವಿಚಾರ. ಕರ್ನಾಟಕ ಸರ್ಕಾರ ಈ ಸಂಬಂಧ ಎಚ್ಚರಿಕೆ ಹಾಗೂ ವಿವೇಕದ ಹೆಜ್ಜೆ ಇಡುತ್ತಲೇ ಬಂದಿದೆ. ಸಂಘರ್ಷದಿಂದ ವ್ಯಾಜ್ಯ ಗೆಲ್ಲಲು ಸಾಧ್ಯವಿಲ್ಲ.ಕಾಂಗ್ರೆಸ್ಸಿಗರು ಸುಳ್ಳಿನಜಾತ್ರೆ ಮಾಡುವ ಬದಲು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ತಮ್ಮ ಮಿತ್ರಪಕ್ಷ ಹಸಿರುಪೀಠದಲ್ಲಿ ಹೂಡಿದ ದಾವೆ ವಾಪಾಸ್ ತೆಗೆಸಲಿ. ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ" ಎಂದು ಆರೋಪಿಸಿದೆ
"2014 ರಲ್ಲಿ ಡಿಪಿಆರ್ ರಚನೆಗೆ ಜಾಗತಿಕ ಪ್ರಸ್ತಾವನೆ ಕರೆದು 2018 ರ ವರೆಗೂ ಕಣ್ಣುಮುಚ್ಚಿ ಕುಳಿತುಕೊಂಡಿದ್ದೇ ಕಾಂಗ್ರೆಸ್ ಸಾಧನೆ. ಕಾಂಗ್ರೆಸ್ಸಿಗರು ಅಂದು ಕಾಲಹರಣ ಮಾಡಿ ಇಂದು ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ.2014 ರಿಂದ 2018 ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಕೆದಾಟು ವಿಚಾರದಲ್ಲಿ ಎಸಗಿದ ಐತಿಹಾಸಿಕ ಪ್ರಮಾದದಿಂದ ಈಗ ಕಾವೇರಿ ಕಣ್ಣೀರು ಸುರಿಸುವಂತಾಗಿದೆ. ಕೇಂದ್ರದಿಂದ ಒಪ್ಪಿಗೆ ಹಾಗೂ ಅನುದಾನ ಪಡೆಯುವಾಗ ನಿದ್ದೆಗೆ ಜಾರಿ ಈಗ ಪಾದಯಾತ್ರೆಯ ನಾಟಕವಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ?" ಎಂದು ಪ್ರಶ್ನಿಸಿದೆ.