ಬೆಂಗಳೂರು, ಡಿ 08 (DaijiworldNews/MS): ರಾಜ್ಯದಲ್ಲಿ ಒಂದೆಡೆ ಮಹಾಮಾರಿ ಕೋವಿಡ್ ಉಲ್ಬಣಗೊಳುತ್ತಿದೆ, ಇನ್ನೊಂದೆಡೆ ಮೇಕೆದಾಟು ಯೋಜನೆಯ ಸದ್ದು ಜೋರಾಗಿದೆ. ಕೊರೋನಾ ಹೆಚ್ಚಳಗೊಳ್ಳುತ್ತಿದ್ದರೂ ಕಾಂಗ್ರೆಸ್ ತನ್ನ ಮೇಕೆದಾಟು ಪಾದಯಾತ್ರೆಯನ್ನು ಮಾಡಿಯೇ ಸಿದ್ದ ಎಂದು ಹೇಳುತ್ತಿದೆ. ಪಾದಯಾತ್ರೆ ಮಾಡಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾದರೆ ನೀವೇ ಹೊಣೆ , ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಇನ್ನೊಂದೆಡೆ ರಾಜ್ಯ ಸರ್ಕಾರ ಎಚ್ಚರಿಸಿದೆ.
ಈ ನಡುವೆ ಭಾನುವಾರ ಆರಂಭವಾಗಲಿರುವ ಪಾದಯಾತ್ರೆಯ ರೂಪುರೇಷೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನಕಪುರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸರ್ಕಾರದ ವಿಧಿಸಿರುವ ನಿರ್ಬಂಧಗಳ ಹೊರತಾಗಿಯೂ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್, ಈ ನಿರ್ಬಂಧಗಳನ್ನು ಯಾವ ರೀತಿ ಎದುರಿಸಬಹುದು ಎನ್ನುವುದರ ಕುರಿತು ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಿದೆ ಎಂದು ತಿಳಿದುಬಂದಿದೆ. ಈ ನಡುವೆ ರಾಮನಗರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು, ಪಾದಯಾತ್ರೆಗೆ ನಡೆಸದಂತೆ ಕಾಂಗ್ರೆಸ್ ಮುಖಂಡರ ಬಳಿ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕೋವಿಡ್ ಕಠಿಣ ಕ್ರಮದ ನೆಪದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯೂ ರಾಜಕೀಯ ಡ್ರಾಮಾ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಹಳೆ ಮೈಸೂರು ಭಾಗದಲ್ಲಿ ಪಾದಯಾತ್ರೆಯಿಂದ ಕಾಂಗ್ರೆಸ್ ಬಲ ಗಟ್ಟಿಯಾದರೆ ತಮ್ಮ ರಾಜಕೀಯ ಲೆಕ್ಕಚಾರ ತಲೆಕೆಳಗಾಗಬಹುದು ಎಂಬ ಆತಂಕದಲ್ಲಿ ಜೆಡಿಎಸ್ ಇದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಗೆ ಜೆಡಿಎಸ್ ಕಟುವಾಗಿ ವಿರೋಧಿಸುತ್ತಿದೆ.