ಸೊಲ್ಲಾಪುರ, ಡಿ 07 (DaijiworldNews/MS): ತಮ್ಮ 16 ತಿಂಗಳ ತಮ್ಮ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಕತ್ತು ಹಿಸುಕಿ ಹತ್ಯೆ ನಡೆಸಿ ಮೃತದೇಹದೊಂದಿಗೆ ಪ್ರಯಾಣಿಸುತ್ತಿದ್ದ ದಂಪತಿಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರೈಲ್ವೇ ಪೊಲೀಸರು ಸೊಲ್ಲಾಪುರ ನಿಲ್ದಾಣದಲ್ಲಿ ಗುಜರಾತ್ಗೆ ಹೋಗುವ ರೈಲಿನಲ್ಲಿ ಇಬ್ಬರನ್ನು ರೈಲ್ವೆ ಪೊಲಿಸರು ಬಂಧಿಸಿದ್ದಾರೆ. ಆರೋಪಿ ದಂಪತಿಗಳು ತೆಲಂಗಾಣದ ಸಿಕಂದರಾಬಾದ್ ನಗರದಿಂದ ರಾಜ್ಕೋಟ್ಗೆ ಹೋಗುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಹತ್ಯೆ ಮಾಡಿದ ಮಗುವಿನ ಮೃತದೇಹವನ್ನು ತಮ್ಮ ಊರಿನಲ್ಲಿ ವಿಲೇವಾರಿ ಮಾಡಲು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಗುವಿನ 26 ವರ್ಷದ ತಂದೆ ಜನವರಿ 3 ರಂದು ಸಿಕಂದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಅಂಬೆಗಾಲಿಡುವ ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಕತ್ತು ಹಿಸುಕಿ ಕೊಲೆ ನಡೆಸಿದ್ದಾನೆ. ತಾಯಿಯೂ ಈತನ ಅಪರಾಧ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ. ರೈಲು ಪ್ರಯಾಣದ ವೇಳೆ ಮಗು ನಿಶ್ಚಲವಾಗಿರುವುದನ್ನು ಗಮನಿಸಿ ಕೆಲವು ಪ್ರಯಾಣಿಕರು ಅನುಮಾನಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
"ಈ ಬಗ್ಗೆ ಸಹ ಪ್ರಯಾಣಿಕರು ನಂತರ ರೈಲಿನಲ್ಲಿ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದರು. ಬಳಿಕ, ಸೊಲ್ಲಾಪುರ ನಿಲ್ದಾಣದ ರೈಲ್ವೆ ಪೊಲೀಸರಿಗೂ ಮಾಹಿತಿ ದೊರಕಿತು"ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ರೈಲ್ವೆ ಪೊಲೀಸ್) ಗಣೇಶ್ ಶಿಂಧೆ ಹೇಳಿದ್ದಾರೆ.
" ಸೊಲ್ಲಾಪುರ ರೈಲು ನಿಲ್ದಾಣದಲ್ಲಿ ಇಬ್ಬರನ್ನು ಕೆಳಗಿಳಿಸಿ ವೈದ್ಯಕೀಯ ತಪಾಸಣೆಯ ನಂತರ, ಮಗು ಸಾವನ್ನಪ್ಪಿದೆ ಎಂದು ಘೋಷಿಸಲಾಗಿದೆ. ದಂಪತಿ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಸೊಲ್ಲಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹತ್ಯೆ ನಡೆಸಿದ್ದು ತಾಯಿ ಕೂಡ ಅಪರಾಧದಲ್ಲಿ ಅವನಿಗೆ ಸಹಾಯ ಮಾಡಿದ್ದಳು. ನಂತರ ಕುಟುಂಬವು ರಾಜ್ಕೋಟ್ಗೆ ಹೋಗುವ ರೈಲು ಹತ್ತಿದ್ದರು. ಅವರು ತಮ್ಮ ಊರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದರು" ಎಂದು ಶಿಂಧೆ ಹೇಳಿದ್ದಾರೆ.