ಚೆನ್ನೈ ಜ, 07 (DaijiworldNews/AN): ತಿರುಪುರ್ ಜಿಲ್ಲೆಯ ಸಿವಿರಿಪಾಳ್ಯಂನಲ್ಲಿರುವ ಪರಮಶಿವನ್ ಸ್ವಾಮಿ ದೇವಸ್ಥಾನಕ್ಕೆ ಸೇರಿದ ವಿಗ್ರಹವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೆಳ ನ್ಯಾಯಾಲಯ ಆದೇಶ ನೀಡಲಾಗಿದ್ದು, ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ಮದ್ರಾಸ್ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್, ಭಗವಂತನನ್ನು ವಿಚಾರಣೆಗೆ ಕರೆಯಲು ಸಾಧ್ಯವಿಲ್ಲ ಎಂದಿದೆ.
ಕೆಳ ನ್ಯಾಯಾಲಯದ ನ್ಯಾಯಾಧೀಶರು, ವಿಗ್ರಹದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಕೀಲ, ಕಮಿಷನರ್ ಅವರನ್ನು ನಿಯೋಜಿಸಬಹುದಿತ್ತು ಮತ್ತು ಅವರ ವರದಿಯನ್ನು ದಾಖಲಿಸಬಹುದಿತ್ತು ಎಂದು ನ್ಯಾಯಮೂರ್ತಿ ಆರ್ ಸುರೇಶ್ ಕುಮಾರ್ ಹೇಳಿದರು.
ಅರ್ಜಿದಾರರ ಪ್ರಕಾರ, ಪುರಾತನ ದೇವಾಲಯದಲ್ಲಿನ ವಿಗ್ರಹವನ್ನು ಕಳವು ಮಾಡಲಾಗಿದೆ, ನಂತರ ಪೊಲೀಸರು ಹಿಂಪಡೆದುಕೊಂಡು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ಅದನ್ನು ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಿ ದೇಗುಲದಲ್ಲಿ ಪುನಃ ಪ್ರತಿಷ್ಠಾಪಿಸಲಾಯಿತು. ಬಳಿಕ ಕುಂಭಾಭಿಷೇಕ ವಿಧಿ ವಿಧಾನವೂ ನಡೆಯಿತು. ಇದೀಗ ವಿಗ್ರಹಕ್ಕೆ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸುತ್ತಿದ್ಧಾರೆ ಎಂದು ತಿಳಿಸಿದ್ದಾರೆ.