ಕೋಲ್ಕತ್ತಾ, ಜ 07 (DaijiworldNews/PY): "ಭಾರತ ಇಂದು 150 ಕೋಟಿ ಕೊರೊನಾ ಲಸಿಕೆ ಡೋಸ್ ನೀಡಿ ಮೈಲಿಗಲ್ಲು ಸಾಧಿಸಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಲ್ಲಿನ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ದೇಶವು ಇಂದು 150 ಕೋಟಿ ಕೊರೊನಾ ಲಸಿಕೆ ಡೋಸ್ಗಳನ್ನು ನೀಡಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ" ಎಂದಿದ್ದಾರೆ.
"ವಿಜ್ಞಾನಿಗಳು ಸೇರಿದಂತೆ ಲಸಿಕೆ ತಯಾರಕರು ಹಾಗೂ ಆರೋಗ್ಯ ಕಾರ್ಯಕರ್ತರ ಹಾಗೂ ಎಲ್ಲರ ಪ್ರಯತ್ನದಿಂದ ದೇಶವು ಶೂನ್ಯದಿಂದ ಆರಂಭವಾದ ಈ ಪ್ರಯಾಣದಲ್ಲಿ ಈ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.
"ದೇಶದ ಅರ್ಹ ವಯಸ್ಕ ಜನಸಂಖ್ಯೆ ಶೇ.90ರಷ್ಟು ಮಂದಿ ಕೊರೊನಾ ಲಸಿಕೆ ಡೋಸ್ ಪಡೆದಿದ್ಧಾರೆ" ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ವಿಡಿಯೋ ಲಿಂಕ್ ಮೂಲಕ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದರು.