ಜೋರ್ಹತ್, , ಡಿ 07 (DaijiworldNews/MS): ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿರುವ, ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪೋಸ್ಟ್ ಮಾಡಿ, ಅವರನ್ನು 'ಹರಾಜು' ಹಾಕುವ ವಿವಾದಾತ್ಮಕ 'ಬುಲ್ಲಿ ಬಾಯಿ' ಅಪ್ಲಿಕೇಶನ್ನ ರಚನೆಯ ಹಿಂದಿನ "ಮಾಸ್ಟರ್ ಮೈಂಡ್", ಎರಡನೇ ವರ್ಷದ ಬಿ ಟೆಕ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್ (21) ನನ್ನು ಎಂಜಿನಿಯರಿಂಗ್ ಕಾಲೇಜು ಅಮಾನತುಗೊಳಿಸಿದೆ.
ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಭೋಪಾಲ್ ಕ್ಯಾಂಪಸ್ನ ಬಿ ಟೆಕ್ ವಿದ್ಯಾರ್ಥಿಯಾಗಿದ್ದ ನೀರಜ್ ಬಿಷ್ಣೋಯ್ ಆತನನ್ನು ಗುರುವಾರ ಅಸ್ಸಾಂನ ಜೋರ್ಹತ್ನಿಂದ ಬಂಧಿಸಲಾಗಿತ್ತು. ಪ್ರಕರಣದಲ್ಲಿ ನೀರಜ್ ಬಿಷ್ಣೋಯ್ ಭಾಗಿಯಾಗಿರುವುದು ಬೆಳಕಿಗೆ ಬಂದ ಕೂಡಲೇ ವಿಐಟಿ ಆಡಳಿತವು ಅವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
" ನಾವು ಮಾಧ್ಯಮಗಳ ಮೂಲಕ ಹಾಗೂ ಸೆಹೋರ್ ಪೊಲೀಸರ ಮೂಲಕ ನೀರಜ್ ಬಿಷ್ಣೋಯ್ ಬಂಧನದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಕೂಡಲೇ ಆತನನ್ನು ಕಾಲೇಜಿನಿಂದ ಅಮಾನತುಗೊಳಿಸಿದ್ದೇವೆ. ಹೆಚ್ಚಿನ ವಿವರಗಳನ್ನು ಆಧರಿಸಿ ಆಡಳಿತವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ, ”ಎಂದು ಸಂಸ್ಥೆಯ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.