ಬೆಂಗಳೂರು, ಡಿ 07 (DaijiworldNews/MS): ಪಂಜಾಬ್ನಲ್ಲಿ ದಲಿತರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಧಾನಿ ಮೋದಿಯವರ ಭದ್ರತಾ ಲೋಪ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಈ ಬಗ್ಗೆ ಕೂ ಮಾಡಿರುವ ಅವರು, ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ, ಕೇಂದ್ರ ಸಚಿವರು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ದಲಿತ ನಾಯಕನ ನೇತೃತ್ವದ ಪಂಜಾಬ್ ಸರ್ಕಾರದ ಹೆಸರು ಕೆಡಿಸಿ, ಅವರನ್ನು ಇಳಿಸಲು ಬಿಜೆಪಿ ಈ ಕೆಲಸ ಮಾಡುತ್ತಿದೆ. ಭದ್ರತಾ ಲೋಪ ಕೇಂದ್ರ ಸರ್ಕಾರದಿಂದಲೇ ಆಗಿದೆ. ಪ್ರಧಾನಿಗಳೇ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಗುರುವಾರವೂ ಈ ವಿಚಾರವಾಗಿ ಮಾತನಾಡಿದ್ದ ಖರ್ಗೆ, ’ಪ್ರಧಾನಿ ಭದ್ರತಾ ವೈಫಲ್ಯ ಘಟನೆಗೆ ಎಸ್ಪಿಜಿ, ಐಬಿ ಮತ್ತು ಕೇಂದ್ರೀಯ ಏಜೆನ್ಸಿಗಳು ಹೊಣೆಯಾಗಿವೆ, ಆದರೆ ಪಂಜಾಬ್ ಸರ್ಕಾರವನ್ನು ದೂಷಿಸಲಾಗುತ್ತಿದೆ. ಇದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅವರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಪ್ರಯತ್ನ’ ಎಂದು ಆರೋಪಿಸಿದ್ದರು.
ದೆಹಲಿಯಿಂದ ಭಟಿಂಡಗೆ ವಿಮಾನದಲ್ಲಿ ಬಂದ ಪ್ರಧಾನಿ ಮೋದಿ ಅವರು, ಫಿರೋಜ್ಪುರಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹೋಗಲು ಆಗಲಿಲ್ಲ. ರಸ್ತೆ ಮಾರ್ಗದಲ್ಲಿ ತೆರಳುತ್ತಿದ್ದ ಪ್ರಧಾನಿ ಮೋದಿ ಅವರ ವಾಹನಕ್ಕೆ ಪ್ರತಿಭಟನಾಕಾರ ರೈತರು ತಡೆಹಾಕಿದರು. ರ್ಯಾಲಿ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ಕಾದ ಮೋದಿ ಅವರು, ರ್ಯಾಲಿ ರದ್ದು ಪಡಿಸಿ ದೆಹಲಿಗೆ ವಾಪಸ್ಸಾಗಿದ್ದರು.