ಪಶ್ಚಿಮ ಬಂಗಾಳ ಜ, 07 (DaijiworldNews/AN): ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಹಾಗೂ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಏಕಾಏಕಿ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಸಭೆ ನಡೆಸಲಿದ್ದಾರೆ.
ಹೌರಾ ಜಿಲ್ಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಪ್ರಧಾನಿ ಅವರೊಂದಿಗಿನ ವರ್ಚುವಲ್ ಸಭೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಬಂಗಾಳದಲ್ಲಿ ಒಂದೇ ದಿನದಲ್ಲಿ ಕೋವಿಡ್ ಪ್ರಕರಣಗಳು 15,000 ಕ್ಕೆ ಏರಿಕೆಯಾಗಿದ್ದು, ಈ ಕಾರಣದಿಂದಾಗಿ ಪಶ್ಚಿಮ ಬಂಗಾಳ ಸರ್ಕಾರವು ಗುರುವಾರ ಅಂತರ್ರಾಜ್ಯ ಸಂಚಾರಕ್ಕಾಗಿ ಆರ್ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ’ಮುಂದಿನ ಎರಡು ವಾರಗಳ ಕಾಲ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಕೊರೊನಾ-19 ನಿರ್ಬಂಧಗಳನ್ನು ವಿಧಿಸಬಹುದು’ ಎಂದು ಹೇಳಿದರು.
ಬಂಗಾಳದಲ್ಲಿ ಗುರುವಾರ 15,421 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 6,569 ಕೋಲ್ಕತ್ತಾದಿಂದ ವರದಿಯಾಗಿದೆ ಎಂದರು.
ರಾಜ್ಯದ ಕೊರೊನಾ-19 ಬುಲೆಟಿನ್ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8,059 ಕ್ಕೆ ಏರಿಕೆಯಾಗಿದ್ದು, ರಾಜ್ಯದ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ರೋಗಿಗಳ ಸಂಖ್ಯೆಯು ಬುಧವಾರದಿಂದ ಗುರುವಾರಕ್ಕೆ 2,228 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಬುಲೆಟಿನ್ನಲ್ಲಿ ತಿಳಿಸಲಾಗಿದೆ.