ತುಮಕೂರು, ಜ 06 (DaijiworldNews/HR): ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮವೊಂದರಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬಳಿ ಸಂಸದ ಜಿ.ಎಸ್.ಬಸವರಾಜು ಅವರು ಸಚಿವ ಮಾಧುಸ್ವಾಮಿ ಬಗ್ಗೆ ಗುಸು ಗುಸು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಚಲ ಮೂಡಿಸಿದೆ.
ನಮ್ಮ ಮಂತ್ರಿ ಹೇಗೆ ಅಂದ್ರೆ, ಕೊರಿಯಾ ಕಿಂಗ್ ಇದ್ದಾನಲ್ಲ ಆ ತರ. ಕೆಟ್ಟ ನನ್ಮಗ, ಇವನಿಂದ ನಮ್ಮ ಜಿಲ್ಲೆಯಲ್ಲಿ ಒಂದು ಸೀಟೂ ಬರಲ್ಲ. ಮಾತು ಎತ್ತಿದರೆ ಹೊಡಿ ಬಡಿ ಅಂತಾನೆ. ನಮ್ಮ ಜಿಲ್ಲೆನ ಹಾಳು ಮಾಡಿ ಬಿಟ್ಟಿದ್ದಾನೆ ಎಂದು ಸಚಿವರ ಕಿವಿಯಲ್ಲಿ ಜಿ.ಎಸ್.ಬಸವರಾಜು ಪಿಸುಗುಟ್ಟಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ, ಆಮೇಲೆ ಮಾತಾಡೋಣ ಸುಮ್ಮನಿರು ಎಂದಿರುವುದು ವಿಡಿಯೋದಲ್ಲಿ ಕಾಣಬಹುದು.
ಇನ್ನು ಗುಸು ಗುಸು ಮುಂದುವರೆಸಿದ ಜಿ.ಎಸ್.ಬಸವರಾಜು ಅವನ್ಯಾರೋ ಇಂಜಿನಿಯರ್ ಗೆ ಹೆಂಡ್ತಿ ಸೀರೆ ಒಗಿ ಹೋಗು. ನೀನು ಅದಕ್ಕೆ ಲಾಯಕ್ಕು ಅಂದಿದ್ದಾನೆ ಇವನು. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸೋಲ್ಲ. ಮೊನ್ನೆ ಒಂದು ಸಾವಿರ ಕೋಟಿ ಡಿಕ್ಲೈರ್ ಮಾಡಿಸಿಕೊಂಡು ಬಂದವನೆ. ಯಾರಿಗೂ ಹೇಳಲ್ಲ, ನಮ್ಮನ್ನೆಲ್ಲಾ ಕರೆಯೋದೇ ಇಲ್ಲ ಎಂದು ದೂರಿದ್ದಾರೆ.
ನನ್ಯಾಕೆ ಬಯ್ಯಲಿ, ಆ ವಿಚಾರವನ್ನು ನಾನು ಮಾತನಾಡಿಲ್ಲ ಇದಕ್ಕೂ ನನಗೂ ಸಂಬಂದ ಇಲ್ಲ ಎಂದ ಸಂಸದ ಜಿ.ಎಸ್ ಬಸವರಾಜು ಹೇಳಿಕೆ ನೀಡಿದ್ದು, ನಾನು ಮಾತನಾಡಿದ್ದು ಒಂದು ಸಾವಿರ ಕೋಟಿ ಕೊಡಿಸಲು ವ್ಯವಸ್ಥೆ ಬಗ್ಗೆ ಅಷ್ಟೇ. 175 ಕೋಟಿ,165 ಕೋಟಿ, ರಸ್ತೆಗಳಿಗೆ, ಅಂಡರ್ ಪಾಸ್, ಯುಜಿಡಿಗಳಿಗೆ ಕೊಡಿಸಿದ್ದೆ. ಹೀಗೆ ಅನುದಾನಗಳು ಬರುತ್ತಿವೆ, ನಮ್ಮನ್ನ ಮೀಟಿಂಗ್ ಗಳಿಗೆ ಕರೆಯಬೇಕು. ಆದರೆ ಮಾಧುಸ್ವಾಮಿ ಕರೆಯಲ್ಲ. ಅದೇ ತಲೆನೋವು ಬಂದಿರೋದು ನನಗೆ ಎಂದು ಹೇಳಿದ್ದಾರೆ.