ಬೆಂಗಳೂರು, ಡಿ 06 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜತೆ ಹೆಜ್ಜೆ ಹಾಕುವಾಗ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಸಲಹೆ ನೀಡಿದೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ ಕಾಂಗ್ರೆಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಆದರೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು ಕಠಿಣ ನಿರ್ಬಂಧಗಳು ಇವೆ. ಹೀಗಿದ್ದರೂ ಪಾದಯಾತ್ರೆ ಮಾಡಿಯೇ ಸಿದ್ದ ಎಂದು ಕಾಂಗ್ರೆಸ್ ಹೇಳಿದೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ ಸಿದ್ದರಾಮಯ್ಯಗೆ ಸಲಹೆ ನೀಡಿದ್ದು, "
ಡಿಕೆಶಿ ನಡಿಗೆ ಜೈಲಿನ ಕಡೆಗೆ ಎಂಬ ವಿಚಾರ ನಿಮಗೆ ತಿಳಿಯದ ವಿಚಾರವೇನಲ್ಲ! ನಿಮ್ಮನ್ನು ಹಾಗೆ ತಿಹಾರ್ ಜೈಲಿನ ಕಡೆಗೆ ಕರೆದೊಯ್ದು ಬಿಟ್ಟಾರು ಜೋಕೆ ಎಂದು ಕುಹಕವಾಡಿದೆ.
ಕೆಪಿಸಿಸಿ ಅಧ್ಯಕ್ಷ ಪದವಿ ಸ್ವೀಕರಿಸುವ ಸಂದರ್ಭದಲ್ಲೂ ಡಿಕೆ ಶಿವಕುಮಾರ್ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರತಿಜ್ಞಾ ಕಾರ್ಯಕ್ರಮ ನಡೆಸಿದರು.ಈಗ ಕೋವಿಡ್ ನಿಯಂತ್ರಣ ನಿರ್ಬಂಧಗಳ ನಡುವೆಯೂ ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ತೊಡೆ ತಟ್ಟುತ್ತಿದ್ದಾರೆ. ನಿಮಗೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಕಾನೂನು ಪಾಲನೆ ಎಲ್ಲರ ಕರ್ತವ್ಯ, ಪಾದಯಾತ್ರೆಯಿಂದ ಕೋವಿಡ್ ಹೆಚ್ಚಾದರೆ ಕಾಂಗ್ರೆಸ್ ಹೊಣೆ ಹೊರಬೇಕು ಎಂದು ಬಿಜೆಪಿ ಹೇಳುತ್ತಿದ್ದು, ಅತ್ತ ಕಡೆ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿ ಆಗ್ರಹಿಸಿ ಪಾದಯಾತ್ರೆ ನಡೆಸಿಯೇ ಸಿದ್ಧ. ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಸರ್ಕಾರ ಕೋವಿಡ್ ಷಡ್ಯಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದೆ.