ಬೆಂಗಳೂರು, ಡಿ 06 (DaijiworldNews/MS): ಪಂಜಾಬ್ನಲ್ಲಿ ಉಂಟಾದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ , "ಇದು ಅತ್ಯಂತ ದುರದೃಷ್ಟಕರ. ನಾವು ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ" ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪ್ರಧಾನಿ ಭದ್ರತೆ ವಿಚಾರದಲ್ಲಿ ವಿವಾದ ಉಂಟಾಗಿರುವುದು ಅತ್ಯಂತ ದುರದೃಷ್ಟಕರ. ಭಾರತದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಭದ್ರತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಹಂತದಲ್ಲೂ ಲೋಪಗಳು ಆಗಬಾರದು. ನಾವು ಇತಿಹಾಸದಿಂದ ಕಲಿಯಬೇಕಾಗಿದೆ’ ಎಂದು ಹೇಳಿದ್ದಾರೆ.
ನಾವು ಇತಿಹಾಸದಿಂದ ಪಾಠ ಕಲಿಯಬೇಕಿದೆ ಎಂದು ಉಲ್ಲೇಖಿಸುವ ಮೂಲಕ ದೇವೇಗೌಡರು ಪರೋಕ್ಷವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
ಒಂದೆಡೆ ಪ್ರಧಾನಿ ಭದ್ರತಾ ಲೋಪದ ಬಗ್ಗೆ ಈಗ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ವೇಳೆ ಬುಧವಾರ ಉಂಟಾದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದ ಘಟನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣವು ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ನಡುವೆ ಪಂಜಾಬ್ ಸರ್ಕಾರ, ಘಟನೆ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಇದು ಮೂರು ದಿನಗಳ ಒಳಗೆ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ಪಂಜಾಬ್ ನ ಫಿರೋಜ್ ಪುರದಲ್ಲಿ ಆಯೋಜಿಸಿದ್ದ ಬಿಜೆಪಿ ರ್ಯಾಲಿಗೆ ಆಗಮಿಸುವುದಕ್ಕೂ ಮುನ್ನ ಬಟಿಂಡಾ ವಿಮಾನ ನಿಲ್ದಾಣದಿಂದ ಹುಸೈನಿವಾಲಾಕ್ಕೆ ಹೋಗುವ ಸಂದರ್ಭದಲ್ಲಿ ಭದ್ರತಾ ಲೋಪವಾಗಿತ್ತುಹುಸೈನಿವಾಲಾ ಮಾರ್ಗದಲ್ಲಿರುವ ಫ್ಲೈಓವರ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುತ್ತಿದ್ದಾಗ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ ಕಾರಣ ಅವರು 15-20 ನಿಮಿಷ ಕಾಯುವಂತಾಗಿತ್ತು.