ಪಟ್ನಾ, ಡಿ 06 (DaijiworldNews/MS): ದೇಶದಲ್ಲಿ ಇನ್ನು ಅನೇಕರು ತಮ್ಮ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಬಾಕಿ ಇದೆ. ಆದರೆ ಇನ್ನೊಬ್ಬ ವ್ಯಕ್ತಿ ಒಂದಲ್ಲ ..ಎರಡಲ್ಲ..ಹನ್ನೊಂದು ಬಾರಿ ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಬಿಹಾರದ ಮಾಧೇಪುರ 84 ವರ್ಷದ ವೃದ್ದ, ತಾನು ಈವರೆಗೂ 11 ಬಾರಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು, ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ಹೇಳಿದ್ದಾರೆ.
ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ ಉಪವಿಭಾಗದ ಪುರೈನಿ ಪೊಲೀಸ್ ಠಾಣೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್ ಅವರು 12 ನೇ ಡೋಸ್ ತೆಗೆದುಕೊಳ್ಳುವ ಮೊದಲು ಸಿಕ್ಕಿಬಿದ್ದಿದ್ದಾರೆ . ಈವರೆಗೆ ೧೧ ಡೋಸ್ಗಳನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಪತ್ತೆ ಮಾಡಲು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಈಗ ಹೇಳಿದ್ದಾರೆ.
"ಲಸಿಕೆಗಳಿಂದ ನನಗೆ ಲಾಭವಾಗಿದೆ, ನನ್ನ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರಿದೆ. ಅದಕ್ಕಾಗಿಯೇ ನಾನು ಅದನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದೇನೆ, ತೆಗೆದುಕೊಂಡಿದ್ದೇನೆ ಎಂದು ಮಂಡಲ್ ತಿಳಿದ್ದಾರೆ.
ನಿವೃತ್ತ ಅಂಚೆ ಇಲಾಖೆಯ ಉದ್ಯೋಗಿಯಾಗಿರುವ ಮಂಡಲ್ ಅವರು ಕಳೆದ ವರ್ಷ ಫೆಬ್ರವರಿ 13 ರಂದು ತಮ್ಮ ಮೊದಲ ಲಸಿಕೆಯನ್ನು ಪಡೆದುಕೊಂಡಿದ್ದು ಆ ಬಳಿಕ ಫೆಬ್ರವರಿ 13 ಮತ್ತು ಡಿಸೆಂಬರ್ 30 ರ ನಡುವೆ ಅವರು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 11ಬಾರಿ ಲಸಿಕೆ ಪಡೆದುಕೊಂಡಿದ್ದಾರೆ. ಅವರು ಲಸಿಕೆ ಪಡೆದುಕೊಂಡಸ್ಥ ಳ, ದಿನಾಂಕ ಮತ್ತು ಸಮಯವನ್ನು ದಾಖಲು ಮಾಡಿ ಇರಿಸಿಕೊಂಡಿದ್ದಾರೆ.
ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಅನಿವಾರ್ಯ. ಅದರೊಂದಿಗೆ ಕೋವಿನ್ ಪೋರ್ಟಲ್ ಅಲ್ಲಿ ನೋಂದಣಿ ಕಡ್ಡಾಯ ಹಾಗಿದ್ದರೂ ಒಬ್ಬ ವ್ಯಕ್ತಿ 11 ಬಾರಿ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ.
ಆದರೆ ಮಂಡಲ್ ಅವರ ಪ್ರಕಾರ ಎಂಟು ಬಾರಿ ಲಸಿಕೆ ಪಡೆಯುವ ವೇಳೆಗೆ ತಮ್ಮ ಆಧಾರ್ ಕಾರ್ಡ್ ಹಾಗೂ ಫೋನ್ ಸಂಖ್ಯೆಯನ್ನು ನೀಡಿದ್ದು ಉಳಿದ ಮೂರು ಬಾರಿ ಮತದಾರರ ಗುರುತಿನ ಚೀಟಿ ಹಾಗೂ ಅವರ ಪತ್ನಿಯ ಫೋನ್ ಸಂಖ್ಯೆಯನ್ನು ಬಳಸಿದ್ದರಂತೆ.