ಸೂರತ್, ಜ 06 (DaijiworldNews/AN): ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ಟ್ಯಾಂಕರ್ನಿಂದ ರಾಸಾಯನಿಕ ಅನಿಲ ಸೋರಿಕೆಯಾದ ಪರಿಣಾಮ ವಿಷಕಾರಿ ಅನಿಲ ಸೇವಿಸಿ 6 ಜನ ಕಾರ್ಮಿಕರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾದ ದುರ್ಘಟನೆ ಗುಜರಾತಿನ ಸೂರತ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಈ ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಪ್ರಜ್ಙಾಹೀನರಾದ ಕಾರ್ಮಿಕರನ್ನು ಹೊಸ ಸಿವಿಲ್ ಆಸ್ಪತ್ರೆಗೆ ದಾಖಲಿಸಿದರು. ನಂತರ ಸೋರಿಕೆ ತಡೆಯಲು ಟ್ಯಾಂಕರ್ನ ವಾಲ್ಟ್ನ್ನು ಮುಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಕಾರ್ಮಿಕರು ಜಿ ಐ ಡಿ ಸಿ ಯ ರಾಜ ಕಮಲ್ ಚಿಕ್ಕಡಿ ಫ್ಲಾಟ್ ನಂ.362ರ ಹೊರಗೆ ನಿಂತಿದ್ದ ರಾಸಾಯನಿಕ ಅನಿಲ ಟ್ಯಾಂಕರ್ ಸಮೀಪದಲ್ಲಿಯೇ ಮಲಗಿದ್ದು, ಆಕಸ್ಮಿಕವಾಗಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಮಲಗಿದ್ದ ಕಾರ್ಮಿಕರು ಹಾಗೂ ಸಮೀಪದ ಕಾರ್ಖಾನೆಯ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ ಎಂದು ಮುಖ್ಯ ಅಗ್ನಿಶಾಮಕದಳದ ಅಧಿಕಾರಿ ಬಸಂತ್ ಪರೀಕ್ ತಿಳಿಸಿದ್ದಾರೆ.