ನವದೆಹಲಿ, ಡಿ 06 (DaijiworldNews/MS): ದೇಶದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು, ಗುರುವಾರ ಪ್ರಕರಣ ಸಂಖ್ಯೆ ಮತ್ತೆ ದ್ವಿಗುಣಗೊಂಡಿದ್ದು ಕಳೆದ 24 ಗಂಟೆಗಳಲ್ಲಿ 90,928 ಹೊಸ ಪ್ರಕರಣಗಳು ಪತ್ತೆಯಾಗಿದ್ದು 325 ಮಂದಿ ಮೃತಪಟ್ಟಿದ್ದಾರೆ. ಕೊವೀಡ್ ಪಾಸಿಟಿವ್ ದರ 6.43% ಏರಿಕೆ ಕಂಡಿದೆ.
ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 2,85,401 ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 19,206 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,43,41,009 ಕ್ಕೆ ತಲುಪಿದೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,82,876ಕ್ಕೆ ತಲುಪಿದೆ.
ಭಾರತದಲ್ಲಿ ಕಳೆದ ವರ್ಷ 2021ರ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ಇದೀಗ 15ರಿಂದ 18 ವರ್ಷದ ಮಕ್ಕಳಿಗೆ ಸಹ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 148.67 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.