ಸೇಡಂ, ಜ 05 (DaijiworldNews/HR): ಜೆಡಿಎಸ್ ಪಕ್ಷವನ್ನು ಮುಗಿಸಿ ಬಿಡುವ ಮಾತುಗಳನ್ನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೇಸ್ ಮುಖಂಡರಿಗೆ ಮುಂದಿನ ದಿನಗಳಲ್ಲಿ ಜನ ಉತ್ತರ ನೀಡಲಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಮುಗಿಸಬೇಕೆನ್ನುವ ಮಾತುಗಳನ್ನಾಡುವ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಕಾಂಗ್ರೇಸ್ ಮುಖಂಡರಿಗೆ ಮುಂದಿನ ದಿನಗಳಲ್ಲಿ ಜನ ಉತ್ತರ ನೀಡಲಿದ್ದಾರೆ. ಜೆಡಿಎಸ್ ಉಳಿಸುವ ಶಕ್ತಿ ಜನ ಮಾಡ್ತಾರೆ. ಕೇವಲ ರಾಜಸ್ಥಾನ, ಛತ್ತೀಸಗಢದಲ್ಲಿ ಮಾತ್ರ ಉಳಿದಿರುವ ಕಾಂಗ್ರೇಸ್ ಪಕ್ಷ ತನ್ನ ಉಳಿವಿಗಾಗಿ ಹೋರಾಡಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರಿಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಜೆಡಿಎಸ್ ಪಕ್ಷ. ಡಾ. ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾನತೆಯನ್ನು ಸಾರಿದ್ದು ಜೆಡಿಎಸ್ ಪಕ್ಷವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಶಕ್ತಿ ಕೊಟ್ಟ ಮಹಾನ್ ನಾಯಕರಾಗಿದ್ದಾರೆ ಎಂದಿದ್ದಾರೆ.
ಬಡತನಕ್ಕೆ ಜಾತಿ ಇರುವುದಿಲ್ಲ, ಈ ವಿಷಯದಲ್ಲಿ ಬಿಜೆಪಿ ಸರಿಯಾಗಿ ನಡೆದುಕೊಂಡಿಲ್ಲ. ದೇವನೊಬ್ಬ ನಾಮ ಹಲವು ಎಂಬಂತೆ ಸಹಬಾಳ್ವೆಯಿಂದ ಬಾಳಿ ದೇಶ ಕಾಪಾಡುವ ಕೆಲಸ ಮಾಡಬೇಕಿದೆ" ಎಂದು ಹೇಳಿದ್ದಾರೆ.