ಬೆಂಗಳೂರು, ಜ 05 (DaijiworldNews/PY): "60 ವರ್ಷ ಮೇಲ್ಪಟ್ಟವರು, ಮುಂಚೂಣಿ ವಾರಿಯರ್ಸ್, ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಜ.10ರಿಂದ ಮೂರನೆ ಹಂತದ ಮೂರನೇ ಲಸಿಕೆಯಾದ ಬೂಸ್ಟರ್ ಡೋಸ್ ನೀಡಲಾಗುವುದು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ ಹಿರಿಯ ನಾಗರಿಕರು, ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ದಾದಿಯರು, ಫ್ರಂಟ್ಲೈನ್ ವಾರಿಯರ್ಸ್ಗೆ ಬೂಸ್ಟರ್ ಡೋಸ್ ನೀಡಲಾಗುವುದು" ಎಂದಿದ್ಧಾರೆ.
"ಸರ್ಕಾರದ ಯಾವುದೇ ದುರುದ್ದೇಶದಿಂದ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿಲ್ಲ. ಸೋಂಕು ಹೆಚ್ಚಳವಾಗುತ್ತಿರುವ ಕಾರಣದಿಂದ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿದೆ. ಹಾಗಾಗಿ, ರಾಜಕೀಯ ಪಕ್ಷಗಳ ನೇತಾರರು, ಸಂಘ-ಸಂಸ್ಥೆಗಳ ನೇತಾರರು ಸರ್ಕಾರದೊಂದಿಗೆ ಸಹಕರಿಸಬೇಕು. ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆ ಅರ್ಥ ಮಾಡಿಕೊಂಡು ರೋಗ ಹರಡುವಿಕೆ ತಡೆಯಲು ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.
"ಮೂರನೇ ಅಲೆಯ ಸೋಂಕು ಅತಿ ವೇಗವಾಗಿ ಹರಡುತ್ತದೆ. ಅದೇ ರೀತಿ ಬಹುಬೇಗ ಕಡಿಮೆಯಾಗುತ್ತದೆ. ಹಾಗಾಗಿ 4ರಿಂದ 6 ವಾರಗಳ ಕಾಲ ಎಚ್ಚರಿಕೆಯಿಂದ ಇದ್ದು ನಿಯಂತ್ರಣ ಮಾಡಬೇಕು. ಸೋಂಕು ಕಾಣಿಸಿಕೊಂಡ ಕೂಡಲೇ ಯಾರೂ ಗಾಬರಿಯಾಗುವುದು ಬೇಡ" ಎಂದಿದ್ಧಾರೆ.
ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಆರೋಗ್ಯ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಡೆಸುವ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಸಾಮಾನ್ಯ ಜ್ಞಾನ ಇದೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.