ನವದೆಹಲಿ, ಡಿ 05(DaijiworldNews/MS): ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಇದೀಗ ರೂಪಾಂತರಿ ವೈರಸ್ಗಳ ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್ ಮನುಕುಲಕ್ಕೆ ಇದೀಗ ಮಾರಣಾಂತಿಕವಾಗಿ ಪರಿಣಮಿಸುತ್ತಿದ್ದು ರೂಪಾಂತರಿ ಒಮಿಕ್ರಾನ್ ಗೆ ಭಾರತದಲ್ಲಿ ಮೊದಲ ಬಲಿಯಾಗಿದೆ.
ಕೊವೀಡ್ ರೂಪಾಂತರಿ ಒಮಿಕ್ರೋನ್ ನಿಂದ ಪ್ರಾಣಕ್ಕೆ ಸಂಚಕಾರವಿಲ್ಲ ಎನ್ನುವ ತಜ್ಞರ ವರದಿಗಳ ನಡುವೆಯೇ ಒಮಿಕ್ರಾನ್ ಗೆ ರಾಜಸ್ತಾನದಲ್ಲಿ ಮೊದಲ ಸಾವು ದಾಖಲಾಗಿದೆ. ಪಶ್ಚಿಮ ರಾಜ್ಯವಾದ ರಾಜಸ್ಥಾನದಲ್ಲಿ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ತನ್ನ ಮೊದಲ ಕೋವಿಡ್ -19 ಸಾವನ್ನು ಬುಧವಾರ ದಾಖಲಿಸಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದಯಪುರದಲ್ಲಿ ಲಕ್ಷ್ಮೀನಾರಾಯಣನಗರದ 73 ವರ್ಷ ವ್ಯಕ್ತಿ ಓಮಿಕ್ರಾನ್ ಗೆ ಬಲಿಯಾಗಿದ್ದು ಡಿಸೆಂಬರ್ 15 ರಂದು ಕೋವಿಡ್ಗೆ ಪಾಸಿಟಿವ್ ದೃಢಪಟ್ಟಿತ್ತು. ಇವರು ಮಧುಮೇಹ, ಅಧಿಕ ರಕ್ತದೊತ್ತಡ ಬಳಲುತ್ತಿದ್ದರು. ಕೊವೀಡ್ ದೃಢವಾದ ದಿನದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿತ್ತು. ಈ ನಡುವೆ ಡಿ. 21ರಂದು ಕೋವಿಡ್ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡುಬಂದಿದೆ. ಡಿ. 25 ರಂದು ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶ ಬಂದಿದ್ದು ಓಮಿಕ್ರಾನ್ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಭಾರತ ಸೇರಿದಂತೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಈಗಾಗಲೇ ಒಮಿಕ್ರಾನ್ ಸೋಂಕು ಆವರಿಸಿದೆ. ಡೆಲ್ಟಾ ವೈರಸ್ಗಿಂತಲೂ 5 ಪಟ್ಟು ವೇಗವಾಗಿ ಈ ಒಮಿಕ್ರಾನ್ ವೈರಸ್ ಹರಡುತ್ತಿದ್ದು, ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕ ಉಂಟಾಗಿದೆ.