ಬೆಂಗಳೂರು, ಡಿ 05(DaijiworldNews/MS): ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಉಲ್ಬಣದ ಹಿನ್ನಲೆಯಲ್ಲಿ ವೀಕೆಂಡ್ ಕರ್ಪ್ಯೂ ಸಹಿತ ರಾಜ್ಯ ಸರ್ಕಾರ ಹಲವು ಕಠಿಣ ನಿಯಮಗಳನ್ನ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , " ಇದು ಕೋವಿಡ್ ಕರ್ಫ್ಯೂ ,ಲಾಕ್ಡೌನ್ ಅಲ್ಲ. ಇದು ಕೇವಲ ಬಿಜೆಪಿಯ ಕರ್ಫ್ಯೂ, ಬಿಜೆಪಿಯ ಲಾಕ್ಡೌನ್. ಅವರಿಗೆ ರಾಜ್ಯದಲ್ಲಿ ರಾಜಕಾರಣ ಕಠಿಣವಾಗುತ್ತಿದ್ದು , ಕಾಂಗ್ರೆಸ್ ಪಕ್ಷವನ್ನು ಎದುರಿಸಲಾಗದೆ ತಂದಿರುವ ಬಿಜೆಪಿ ನಿಯಮ, ಬಿಜೆಪಿ ಲಾಕ್ ಡೌನ್ ಅಷ್ಟೆ, ಇದರಲ್ಲಿ ಬಿಜೆಪಿಯ ಸ್ವಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
"ಬಿಜೆಪಿ ಆಡಳಿತವೂ ನಮ್ಮ ಮೇಲಿನ ದ್ವೇಷಕ್ಕೆ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದೆ. ನಾವು ಕುಡಿಯುವ ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ. ವಾಕ್ ಫಾರ್ ವಾಟರ್ ಮಾಡುತ್ತೇವೆ. ಅವರಿಗೂ ಕಾವೇರಿ ನದಿಯ ನೀರು ಕುಡಿಸುತ್ತೇವೆ. ಆದರೆ ಅವರು ನೈಟ್ ಕರ್ಫ್ಯೂ ಜಾರಿ ಮಾಡಿ ಜನ ಸಾಮಾನ್ಯರ ಮೇಲೆ ವ್ಯಾಪಾರಿ ವರ್ತಕರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. ಈ ಸರ್ಕಾರ ವರ್ತಕರ ಹತ್ಯೆ ನಡೆಸುವುದೊಂದು ಬಾಕಿಯಿದೆ " ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಜ್ಯದಲ್ಲಿ ಪ್ರತಿದಿನಕ್ಕೆ 2ರಿಂದ 3 ಸಾವಿರ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಎನ್ನುತ್ತಿದ್ದಾರೆ , ಆದರೆ ಯಾರ್ಯಾರಿಗೆ ಎಲ್ಲೆಲ್ಲಿ ಸೋಂಕು ಬಂದಿದೆ ಎಂದು ತಿಳಿಸಿದರೆ ನಾವು ಹೋಗಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ "ಎಂದು ವ್ಯಂಗ್ಯವಾಡಿದ್ದಾರೆ.
"ನಾವು ನಿಯಮದ ಪ್ರಕಾರವೇ ನಡೆಯುತ್ತೇವೆ. ನಮ್ಮದು ಪ್ರತಿಭಟನೆ ಅಲ್ಲ ಪ್ರಾರ್ಥನೆ. ಬೆಂಗಳೂರಿನ ಜನರಿಗೆ ನೀರು ಸಿಗಲು ಪ್ರಾರ್ಥನೆ ಮಾಡಲು ನಡೆಯುತ್ತೇವೆ. ಸರ್ಕಾರ ನಮಗೆ ನಿರ್ಬಂಧ ಹೇರಿ ನೊಟೀಸ್ ನೀಡಿದೆ, ಆದರೆ ನಾವು ಧರಣಿ ರ್ಯಾಲಿ, ಪ್ರತಿಭಟನೆ ಮಾಡುತ್ತಿಲ್ಲ, ಜನರಿಗೆ ನೀರಿಗಾಗಿ ನಡೆಯುತ್ತೇವೆ. ಜನವರಿ 9ರಿಂದ ನಾವು ಮಾಡುತ್ತಿರುವುದು "ನೀರಿಗಾಗಿ ನಡಿಗೆ". ಆದರೆ ಬಿಜೆಪಿಯೂ ನಮ್ಮ ಮೇಲಿನ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.